ಮಾಲ್‍ಗೆ ಬೀಗ, ರು. 10 ಕೋಟಿ ತೆರಿಗೆ ವಸೂಲಿ

ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದ ಪ್ರತಿಷ್ಠಿತ ಮಾಲ್‍ವೊಂದರ ಮೇಲೆ ದಾಳಿ ನಡೆಸಿದ ಮೇಯರ್ ತಂಡ 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು
ಮಾಲ್
ಮಾಲ್

ಬೆಂಗಳೂರು: ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದ ಪ್ರತಿಷ್ಠಿತ ಮಾಲ್‍ವೊಂದರ ಮೇಲೆ ದಾಳಿ ನಡೆಸಿದ ಮೇಯರ್ ತಂಡ 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೀದಿಯಲ್ಲಿ ನಿಲ್ಲಿಸಿತು. ಅಷ್ಟೇ ಅಲ್ಲ. ಮಾಲ್‍ಗೆ ಬೀಗ ಜಡಿದು, ಮಾಲೀಕರ ವಿರುದ್ಧ ಗುಡುಗಿ ಒಂದೇ ದಿನದಲ್ಲಿ ರು. 10 ಕೋಟಿ ತೆರಿಗೆ ವಸೂಲಿ ಆಗುವಂತೆಯೂ ಮಾಡಿತು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ಲಾಸಿಕ್ ರಿಯಾಲಿಟಿ ಮಾಲ್ 7 ತಿಂಗಳಿನಿಂದ ರು. 10 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಪಾವತಿಸದೆ ಸತಾಯಿಸುತ್ತಿತ್ತು. ಇದನ್ನು ತಿಳಿದ ಮೇಯರ್ ಶಾಂತಕುಮಾರಿ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಸಿಬ್ಬಂದಿಯನ್ನು ಪ್ರಶ್ನಿಸಿತು. ಆಗ ರು. 20 ಕೋಟಿಗೂ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಇರುವುದು ತಿಳಿಯಿತು. 5.73 ಲಕ್ಷ ಚ.ಅಡಿ ವಿಸ್ತೀರ್ಣದ ಈ ಮಾಲ್ 9 ಅಂತಸ್ತಿನ ಹಲವು ವಿಭಾಗಗಳನ್ನು ಹೊಂದಿದೆ. ಇದರಲ್ಲಿ ಒರಾಕಲ್ ಐಟಿ ಸಂಸ್ಥೆ, ಶಾಪರ್ ಸ್ಟಾಪ್, ಅವಿನ್ಯೂ ಬಟ್ಟೆ ಅಂಗಡಿ ಸೇರಿದಂತೆ ನಾನಾ ವಾಣಿಜ್ಯ ಸಂಸ್ಥೆಗಳಿವೆ. ಈ ಸಂಸ್ಥೆಗಳ ಪೈಕಿ ಒಂದನ್ನು ಹೊರತುಪಡಿಸಿದರೆ, 8 ಸಂಸ್ಥೆಗಳು ಉದ್ದಿಮೆ ಪರವಾನಗಿಯನ್ನೇ ಪಡೆದಿಲ್ಲ. ಹೀಗಾಗಿ ಬಡ್ಡಿ ಸೇರಿದಂತೆ ರು. 20 ಕೋಟಿಗೂ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಇರುವುದು ಪತ್ತೆಯಾಯಿತು.

ಇದರಿಂದ ಸಿಟ್ಟಿಗೆದ್ದ ಮೇಯರ್ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಿಬ್ಬಂದಿ ಸರಿಯಾಗಿ ಉತ್ತರಿಸದಿದ್ದಾಗ ಆಕ್ರೋಶಗೊಂಡ ಮೇಯರ್, ಈ ಬಗ್ಗೆ ಬಿಎಂಟಿಎಫ್ ತನಿಖೆಗೆ ಒಪ್ಪಿಸಲಾಗುವುದು ಎಂದರು. ಅಧಿಕಾರಿಗಳ ತಂಡ, ಮಾಲ್‍ನ 9ನೇ ಅಂತಸ್ತಿನಲ್ಲಿ ವ್ಯಾಪಾರದಲ್ಲಿ ನಿರತರಾಗಿದ್ದ ಸುಮಾರು 2500ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಹೊರಗೆ ಕಳುಹಿಸಿತು. ನಂತರ ಇಡೀ ಮಾಲ್‍ಗೆ ಬೀಗ ಜಡಿಸಿ ಜಪ್ತಿ ಮಾಡುವಂತೆ ಸೂಚಿಸಿತು. ಅಷ್ಟೊತ್ತಿಗೆ ಮಾಲ್‍ನ ಹಿರಿಯ ವ್ಯವಸ್ಥಾಪಕರು ಸಂಜೆ ವೇಳೆಗೆ ಆಸ್ತಿ ತೆರಿಗೆ ಪಾವತಿಸುವುದಾಗಿ ಭರವಸೆ ನೀಡಿದರು. ಸಂಜೆ ವೇಳೆಗೆ ರು. 10 ಕೋಟಿಯ ಚೆಕ್‍ಅನ್ನು ಪಾಲಿಕೆ ಆಯುಕ್ತ ಲಕ್ಷ್ಮೀನಾರಾಯಣ ಅವರಿಗೆ ನೀಡಿದರು. ದಾಳಿ ಸಮಯದಲ್ಲಿ ಉಪ ಮೇಯರ್ ರಂಗಣ್ಣ ಹಾಗೂ ಅಧಿಕಾರಿಗಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com