ಒಡೆಯುವ ಮುನ್ನ ಕಾಲವಕಾಶ ಕೊಡಿ

ಬಿಬಿಎಂಪಿ ವಿಸರ್ಜನೆಗೆ ಸರ್ಕಾರ ನೀಡಿರುವ ನೋಟಿಸ್‍ಗೆ ಉತ್ತರಿಸಲು ಕಾಲಾವಕಾಶ ಕೋರಲು ಬಿಬಿಎಂಪಿ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ...
ಬಿಬಿಎಂಪಿ ಕಲಾಪ
ಬಿಬಿಎಂಪಿ ಕಲಾಪ
Updated on

ಬೆಂಗಳೂರು: ಬಿಬಿಎಂಪಿ ವಿಸರ್ಜನೆಗೆ ಸರ್ಕಾರ ನೀಡಿರುವ ನೋಟಿಸ್‍ಗೆ ಉತ್ತರಿಸಲು ಕಾಲಾವಕಾಶ ಕೋರಲು ಬಿಬಿಎಂಪಿ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಗರಾಭಿವೃದ್ಧಿ ಇಲಾಖೆ ನೀಡಿದ್ದ ನೋಟಿಸ್ ಬಗ್ಗೆ ಚರ್ಚಿಸಲು ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ವಿರೋಧದ ನಡುವೆಯೇ ಆಡಳಿತ ಪಕ್ಷ ನಿರ್ಣಯ ಕೈಗೊಂಡಿತು. ಈ ಬಗ್ಗೆ ದೀರ್ಘ ಚರ್ಚೆಯಾದ ನಂತರವೇ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರೂ ನಿರ್ಣಯಕ್ಕೆ ಅನುಮೋದನೆ ದೊರೆಯಿತು. ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ಸಮಿತಿ ವರದಿ, ಸಿಐಡಿ ವರದಿ, ಟಿವಿಸಿಸಿ ವರದಿ ಆಧಾರದ ಮೇಲೆ ಸರ್ಕಾರ ನೋಟಿಸ್ ನೀಡಿದೆ. ಆದರೆ ವರದಿಗಳು ಪಾಲಿಕೆಯಲ್ಲಿ ಲಭ್ಯವಿಲ್ಲದಿರುವುದರಿಂದ ಸರ್ಕಾರವೇ ಈ ವರದಿಗಳನ್ನು ಬಿಬಿಎಂಪಿಗೆ ನೀಡಬೇಕಿದೆ. ವರದಿ ಓದಿ ಪ್ರತ್ಯುತ್ತರ ನೀಡಲು ಕಾಲಾವಕಾಶ ಅಗತ್ಯವಿದೆ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತಿಪಾದಿಸಿದರು.

ಎನ್.ಆರ್.ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಬಿಬಿಎಂಪಿ ದಿಕ್ಕು ತಪ್ಪಿಸಲು ಸ್ಪಷ್ಟೀಕರಣ ಕೇಳಿದೆ. ಸಾಲ, ಅಡಮಾನ, ಆಡಳಿತ ವೈಫಲ್ಯ ಎಂದು ಸರ್ಕಾರ ಹೇಳಿದ್ದರೂ, ಹಿಂದಿನ ಆಡಳಿತವೇ ಇದಕ್ಕೆ ಪ್ರಮುಖ ಕಾರಣ. 2001-06ರವರೆಗಿನ ಆಡಳಿತದಲ್ಲಿ ಮಾಡಿದ ರು.753 ಕೋಟಿ ಸಾಲ, ರು.4ಸಾವಿರ ಕೋಟಿ ಮೌಲ್ಯದ 153 ಆಸ್ತಿಗಳನ್ನು ರು. 3 ಕೋಟಿಗೂ ಕಡಿಮೆ ದರಕ್ಕೆ ಮಾರಾಟ, 2000-04ರ ಅವಧಿಯಲ್ಲಿ 4,500 ಕಿ.ಮೀ.ರಸ್ತೆಗೆ ಶುಲ್ಕ ವಿಧಿಸದೆ ಓಎಫ್ ಸಿಗೆ ನೀಡಿದ ಅವಕಾಶದಿಂದ ಪಾಲಿಕೆ ನಷ್ಟಕ್ಕೆ ಒಳಗಾಗಿದೆ. ಆದರೆ ಸರ್ಕಾರ ಹಿಂದಿನ ಆಡಳಿತದಲ್ಲಾದ ಲೋಪ ಪರಿಗಣಿಸಿಲ್ಲ. ಈ ಅವಧಿಯ ಹಗರಣಗಳನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಕ್ರಿಮಿನಲ್, ಲೋಕಾಯುಕ್ತ ತನಿಖೆಯ ಹಾಗೂ ಭ್ರಷ್ಟಾಚಾರ ಆರೋಪ ಹೊಂದಿದ್ದ ಅಧಿಕಾರಿಗಳನ್ನೇ ಸರ್ಕಾರ ಬಿಬಿಎಂಪಿಗೆ ಉದ್ದೇಶಪೂರ್ವಕವಾಗಿ ಕಳುಹಿಸಿದೆ. 250 ಅಧಿಕಾರಿಗಳನ್ನು ಒತ್ತಾಯಪೂರ್ವಕವಾಗಿ ಬಿಬಿಎಂಪಿಗೆ ನೇಮಿಸಿದ್ದು, 52 ಅಧಿಕಾರಿಗಳ ಮೇಲೆ ಲೋಕಾಯುಕ್ತದಿಂದ ಎಫ್ ಐಆರ್ ದಾಖಲಾಗಿತ್ತು. ಭ್ರಷ್ಟ ಅಧಿಕಾರಿಗಳನ್ನೇ  ನೇಮಿಸಿದ ಸರ್ಕಾರ ನಂತರ ಬಿಬಿಎಂಪಿ ಆಡಳಿತ ವೈಫಲ್ಯದ ಬಗ್ಗೆ ಸ್ಪಷ್ಟನೆ ಕೇಳಿದೆ ಎಂದು ಆರೋಪಿಸಿದರು. ಕಾಂಗ್ರೆಸ್‍ನ ಮಂಜುನಾಥ ರೆಡ್ಡಿ ಮಾತನಾಡಿ, ನೋಟಿಸ್ ಬಂದ ಕೂಡಲೇ ಸರ್ಕಾರದ ಮೇಲೆ ಆರೋಪ ಮಾಡುವುದಾದರೆ, ಆಡಳಿತ ವರದಿ ಹಾಗೂ ಲೆಕ್ಕಪತ್ರ ವರದಿ ಇನ್ನೂ ಏಕೆ ಮಂಡಿಸಿಲ್ಲ ಎಂದು ಸ್ಪಷ್ಟನೆ ಕೊಡಬೇಕು.

ಕೋಟ್ಯಂತರ ರು. ಅಕ್ರಮ ನಡೆದ ಓಎಫ್ ಸಿ ವಿಭಾಗದಲ್ಲಿ ತನಿಖೆ ಮಾಡಿ ವರದಿ ನೀಡಿದ್ದರೂ ಮುಂದೇನಾಯಿತು ಎಂಬ ಮಾಹಿತಿಯಿಲ್ಲ. ಟಿಡಿಆರ್ ಅಕ್ರಮ ನಡೆದರೂ ಕ್ರಮ ಕೈಗೊಂಡಿಲ್ಲ. ಕಸ ವಿಲೇವಾರಿ ಮಾಫಿಯಾದಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿದರೂ ನಿಯಂತ್ರಿಸಲಿಲ್ಲ. ದ್ವಿಚಕ್ರ ವಾಹನಗಳಲ್ಲಿ ಕಸ ಸಾಗಿಸಲಾಗಿದೆ ಎಂದು ಮಾಹಿತಿ ನೀಡಿ ಹಣ ಪಾವತಿಸಿಕೊಳ್ಳಲಾಗಿದೆ. ಈ ಮಾಹಿತಿಗಳು ಆಡಳಿತಕ್ಕೆ ತಿಳಿದೂ ಸುಮ್ಮನಿದೆ. ಸರ್ಕಾರದ ತಪ್ಪು ಎನ್ನುವುದಾದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ ಅಧಿಕಾರಿಗಳ ಮಾಹಿತಿ ನೀಡಬೇಕು. ಆಡಳಿತ ವೈಫಲ್ಯದಿಂದಾಗಿಯೇ ಸರ್ಕಾರ ನೋಟಿಸ್ ಕಳುಹಿಸಿದೆ ಎಂದು ಆರೋಪಿಸಿದರು. ಜೆಡಿಎಸ್‍ನ ಆರ್.ಪ್ರಕಾಶ್, ಅವಧಿ ಮುಗಿದು ಸದಸ್ಯರು ಮನೆಗೆ ತೆರಳುವ ಸಮಯದಲ್ಲಿ ಸರ್ಕಾರ ಕೊಡುಗೆಯಾಗಿ ನೋಟಿಸ್ ನೀಡಿದೆ. ಬಿಬಿಎಂಪಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ತಿಳಿದಿದ್ದರೂ ಕೊನೆ ಸಮಯದಲ್ಲೇ ನೋಟಿಸ್ ಕಳುಹಿಸಿದೆ. ಬಿಬಿಎಂಪಿ ಬಗ್ಗೆ ಏನೂ ತಿಳಿಯದ ಅ„ಕಾರಿ ಕಠಾರಿಯಾ ಅವರಿಂದ ತನಿಖೆ ಮಾಡಿಸಿದ್ದು, ತಿಪ್ಪೆಗುಂಡಿಗೆ ಎಸೆಯಲು ಮಾತ್ರ ವರದಿ ಅರ್ಹವಾಗಿದೆ ಎಂದರು.

ನಾಮಫಲಕದಲ್ಲಿ ಹೆಸರು ಸೇರಿಸಲು ಧರಣಿ ಪೌರಸಭಾಂಗಣದ ಕಟ್ಟಡದಲ್ಲಿ ಇತ್ತೀಚೆಗೆ ಅನಾವರಣಗೊಂಡ ನಾಮಫಲಕದಲ್ಲಿ ಹೆಸರು ಸೇರಿಸಬೇಕು ಎಂದು ಒತ್ತಾಯಿಸಿ ನಾಮನಿರ್ದೇಶಿತ ಸದಸ್ಯರು ಧರಣಿ ನಡೆಸಿದರು. ಇಷ್ಟು ಸಣ್ಣ ವಿಚಾರಕ್ಕೂ ನಾಚಿಕೆಯಿಲ್ಲದೆ ಧರಣಿ ನಡೆಸುತ್ತಿದ್ದಾರೆ ಎಂದು ಪದ್ಮನಾಭರೆಡ್ಡಿ, ಗಂಗಭೈರಯ್ಯ ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ 40 ಸದಸ್ಯರ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಮೇಯರ್ ಶಾಂತಕುಮಾರಿ ಭರವಸೆ ನೀಡಿದ ಬಳಿಕ ಧರಣಿ ಹಿಂತೆಗೆದುಕೊಳ್ಳಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com