ರು. 66 ಲಕ್ಷ ಹಣ ದೋಚಿ, ವಾಹನ ಸಮೇತ ಪರಾರಿಯಾದ ಕಿಲಾಡಿ ಚಾಲಕ!

ಎಟಿಎಂಗೆ ಹಣ ತುಂಬುವ ವಾಹನದ ಚಾಲಕನೇ ರು.66 ಲಕ್ಷ ಹಣ ಹಾಗೂ ಬಂದೂಕಿನೊಂದಿಗೆ ಪರಾರಿಯಾಗಿರುವ ಘಟನೆ ಸಿಟಿ ಮಾರುಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನದ ಚಾಲಕನೇ ರು.66 ಲಕ್ಷ ಹಣ ಹಾಗೂ ಬಂದೂಕಿನೊಂದಿಗೆ ಪರಾರಿಯಾಗಿರುವ ಘಟನೆ ಸಿಟಿ ಮಾರುಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಎಸ್‍ಬಿಐ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗಳ ಹಣವನ್ನು ಅವುಗಳ ಎಟಿಎಂ ಕೇಂದ್ರಕ್ಕೆ ತುಂಬಿಸುವ ಗುತ್ತಿಗೆಯನ್ನು ಬ್ರಿಂಕ್ಸ್ ಆರ್ಯ ಇಂಡಿಯಾ ಕಂಪನಿ ತೆಗೆದುಕೊಂಡಿದೆ. ಮಂಗಳವಾರ ರು.1 ಕೋಟಿ ಹಣದೊಂದಿಗೆ ಟಾಟಾ ಸುಮೋ ವಾಹನದಲ್ಲಿ ಚಾಲಕ ಜೇಮ್ಸ್, ಎಟಿಎಂ ಯಂತ್ರದೊಳಗೆ ಹಣ ತುಂಬುವ ಇಬ್ಬರು ತಂತ್ರಜ್ಞರು ಹಾಗೂ ಒಬ್ಬ ಗನ್‍ಮ್ಯಾನ್ ತಮ್ಮಯ್ಯ ಹಣ ತುಂಬಲು ಹೋಗುತ್ತಿದ್ದರು.

ಅವಿನ್ಯೂ ರಸ್ತೆ, ಎಸ್‍ಪಿ ರಸ್ತೆಯಲ್ಲಿರುವ ಎಟಿಎಂ ಘಟಕಗಳಿಗೆ ಹಣ ತುಂಬಿಸಿ ಸಿಟಿ ಮಾರುಕಟ್ಟೆ ಮಸೀದಿ ಬಳಿ ಇರುವ ಎಟಿಎಂ ಘಟಕಕ್ಕೆ ಹಣ ತುಂಬಿಸಲು ಬಂದಿದ್ದರು. ಸ್ವಲ್ಪ ಹಣವನ್ನು ತೆಗೆದುಕೊಂಡ ಸಿಬ್ಬಂದಿ ಎಟಿಎಂನೊಳಗೆ ಪ್ರವೇಶಿಸಿದ್ದಾರೆ. ಇನ್ನು ಹಣದ ಭದ್ರತೆಗೆ ಇದ್ದ ಗನ್‍ಮ್ಯಾನ್ ತಿಮ್ಮಯ್ಯ ಮೂತ್ರ ವಿಸರ್ಜನೆಗೆಂದು ವಾಹನದಲ್ಲೇ ಬಂದೂಕು ಇಟ್ಟು ಸಮೀಪದ ಶೌಚಾಲಯಕ್ಕೆ ತೆರಳಿದ್ದ. ಈ ವೇಳೆ ಒಬ್ಬನೇ ಇದ್ದ ಚಾಲಕ ಜೇಮ್ಸ್ ರು.66 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಉತ್ತರ ವಿಭಾಗ ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.

ಎಟಿಎಂನೊಳಗೆ ಹೋಗಿದ್ದ ಸಿಬ್ಬಂದಿ ಹಾಗೂ ಶೌಚಾಲಯಕ್ಕೆ ಹೋಗಿದ್ದ ಗನ್ ಮ್ಯಾನ್ ತಮ್ಮಯ್ಯ ಬಂದಿದ್ದಾರೆ. ಆದರೆ, ವಾಹನ ಇಲ್ಲದ್ದನ್ನು ಗಾಬರಿಗೊಂಡು ಪಾರ್ಕಿಂಗ್ ಸಮಸ್ಯೆಯಿಂದ ಬೇರೆಡೆ ನಿಲ್ಲಿಸಿರಬಹುದು ಎಂದು ಸುತ್ತಮುತ್ತ ಹುಡುಕಾಡಿದ್ದಾರೆ. ಕೊನೆಗೆ ಎಲ್ಲಿಯೂ ಸಿಗದ ಕಾರಣ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು 4.30ರ ಸುಮಾರಿಗೆ ಕೆ. ಆರ್.ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಾಲಕನ ಪೂರ್ವಾಪರ ಕುರಿತು ಹಣ ಸಾಗಿಸುತ್ತಿದ್ದ ಸಂಸ್ಥೆಗೆ ಸರಿಯಾದ ಮಾಹಿತಿ ಇಲ್ಲ. ಆತ ಇತ್ತೀಚೆಗಷ್ಟೇ ಕೆಲಸಕ್ಕೆ ಬಂದಿದ್ದ ಎಂಬುದಾಗಿ ಅವರು ಹೇಳುತ್ತಿದ್ದಾರೆ. ಪರಾರಿಯಾದ ಚಾಲಕ ಜೇಮ್ಸ್ ಕೇರಳ ಮೂಲದವ. ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಮಾರ್ಗದ ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com