
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಯಾಮಾರಿಸಿ ರು.27ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆಂಧ್ರದ ಮೂವರು ಖದೀಮ ಪೊಲೀಸರು ನಗರ ಪೊಲೀಸರರಿಗೆ ಸಿಕ್ಕಿಬಿದ್ದಿದ್ದಾರೆ.
ಈ ಜಾಲದಲ್ಲಿ ಆಂಧ್ರ ಪೊಲೀಸರೇ ಕಳ್ಳರಾಗಿ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ವಿಶೇಷ. ಆಂಧ್ರದ ಕರ್ನೂಲ್ ಜಿಲ್ಲೆಯ ಮುಜಫರ್‍ನಗರದ ಶೇಖರ್(40), ಪತ್ತಿಕೊಂಡ ತಾಲ್ಲೂಕು ಮದ್ದಿಕೆರೆ ಗ್ರಾಮದ ಸತ್ಯ ನಾರಾಯಣ ಅಲಿಯಾಸ್ ಸತ್ಯ (41), ಹಾಗೂ ಅದೋನಿ ತಾಲ್ಲೂಕು ಆರ್ ಕೆಟಿ ಸ್ಟ್ರೀಟ್ ನಿವಾಸಿ ಜಯಣ್ಣ (43) ಬಂಧಿತರು. ಕರ್ನೂಲ್ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೇದೆಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾ.12ರಂದು ಅನಂತಪುರ ಜಿಲ್ಲೆಯ ಎಮ್ಮಿಗನೂರು ಪಟ್ಟಣದಿಂದ ಟಿಪ್ಪು ಸುಲ್ತಾನ್ ಎಂಬುವವರು ಚಿನ್ನಖರೀದಿಗೆಂದು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಎಮ್ಮಿಗನೂರು ಪಟ್ಟಣದಲ್ಲಿ ಚಿನ್ನಾಭರಣ ಮಳಿಗೆ ಹೊಂದಿರುವ ಆಲೀಂ ಬೇಗ್ ಎಂಬುವವರು, ಟಿಪ್ಪು ಸುಲ್ತಾನ್ ಹತ್ತಿರ ರು.27 ಲಕ್ಷ ಹಣ ನೀಡಿ ಚಿನ್ನಾಭರಣ ಖರೀದಿಗೆಂದು ಬೆಂಗಳೂರಿಗೆ ಕಳುಹಿಸಿದ್ದರು. ಮಾಲೀಕರ ಅಪ್ಪಣೆಯಂತೆ ಆಷ್ಟೂ ಹಣವನ್ನು ಬ್ಯಾಗ್ ನಲ್ಲಿಟ್ಟುಕೊಂಡು ಟಿಪ್ಪು ಸುಲ್ತಾನ್ ಅಂದು ಎಮ್ಮಿಗನೂರಿನಿಂದ ಸಾರಿಗೆ ಬಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಟಿಪ್ಪು ಸುಲ್ತಾನ್ ಮಾ.12ರಂದು ಹಣದೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ವಿಷಯ ಅರಿತ ಜಯಣ್ಣ ಮತ್ತು ಆತನ ಸಹಚರರು ಕೂಡ ಅದೇ ಬಸ್ನಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ಟಿಪ್ಪು ಇಳಿಯುತ್ತಿದಂತೆ ಆತನನ್ನು ಜಯಣ್ಣ ಮತ್ತು ತಂಡ ಹಿಡಿದುಕೊಂಡು ಆದಾಯ ತೆರಿಗೆ ಅಧಿಕಾರಿಗಳು ಎಂದು ಪೊಲೀಸ್ ಗುರುತಿನ ಚೀಟಿ ತೋರಿಸಿ ಪರಿಚಯ ಮಾಡಿಕೊಂಡಿದ್ದಾರೆ. ನಂತರ ತೆರಿಗೆ ವಂಚಿಸಿ ಹಣ ಸಾಗಣೆ ಮಾಡುತ್ತಿರುವುದರಿಂದ ವಿಚಾರಣೆ ಮಾಡಬೇಕೆಂದು ಬೆದರಿಸಿ ಟಿಪ್ಪುವನ್ನು ಟಾಟಾ ಇಂಡಿಕಾ ಕಾರಿಗೆ ಹತ್ತಿಸಿಕೊಂಡಿದ್ದಾರೆ.
ಬಳಿಕ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದ ತಂಡ ಯಲಹಂಕ ಬಳಿ ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ಸ್ವಲ್ಪ ದೂರ ತೆರಳಿ ಟೊಯೋಟಾ ಇಷಿಯಸ್ ಕಾರನ್ನು ಬಾಡಿಗೆ ಪಡೆದು ಟಿಪ್ಪುನನ್ನು ಅಲ್ಲೇ ಬಿಟ್ಟು ಪರಾರಿಯಾಗಿತ್ತು. ಈ ಸಂಬಂಧ ಟಿಪ್ಪು ಕೊಟ್ಟ ದೂರಿನ ಮೇರೆಗೆ ಇನ್ಸ್ಪೆಕ್ಟರ್ಗಳಾದ ರವಿ ಪಾಟೀಲ್, ಟಿ.ರಂಗಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ನಲ್ಲಿ ಬಾಡಿಗೆ ಕಾರು ಬುಕಿಂಗ್:
ಟಿಪ್ಪು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಬೆಂಗಳೂರಿಗೆ ಬಂದ ಜಯಣ್ಣ ಮತ್ತು ಆತನ ಸಹಚರರು, ಟಾಟಾ ಇಂಡಿಕಾ ಕಾರನ್ನು ಬುಕ್ ಮಾಡಿ ಮೈಸೂರ್ ಬ್ಯಾಂಕ್ ಸರ್ಕಲ್ ಬಳಿಗೆ ಕರೆಸಿಕೊಂಡಿದ್ದರು. ಆದರೆ ತಮ್ಮ ವರ್ತನೆಯಿಂದ ಚಾಲಕನಿಗೆ ಅನುಮಾನ ಬಂದಿದೆ ಎಂದು ಭಾವಿಸಿದ ತಂಡ, ಆರು ಮಂದಿ ಕೂರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಇಂಡಿಕಾ ಕಾರನ್ನು ನಿರಾಕರಿಸಿ, ಟಯೋಟಾ ಇಷಿಯಸ್ ಕಾರನ್ನು ಬುಕ್ ಮಾಡಿ ಯಲಹಂಕಕ್ಕೆ ಕರೆಸಿಕೊಂಡು ಆಂಧ್ರಪ್ರದೇಶಕ್ಕೆ ತೆರಳಿತ್ತು.
ಮೊಬೈಲ್ ನೆಟ್ವರ್ಕ್ ಸುಳಿವು
ಬಂಧಿತ ಜಯಣ್ಣನಿಗೆ ಬಾಂಬೆ ಜ್ಯುವೆಲರಿ ಅಂಗಡಿ ಸಿಬ್ಬಂದಿ ಪರಿಚಯವಿತ್ತು. ಕಾನ್ಸ್ಟೆಬಲ್ ಎಂಬ ಸಲುಗೆಯಲ್ಲಿ ಕಚ್ಚಾ ಚಿನ್ನವನ್ನು ಎಲ್ಲಿಂದ ಖರೀದಿ ಮಾಡುತ್ತಾರೆ, ಎಷ್ಟು ದಿನಕೊಮ್ಮೆ, ಯಾರು ತರುತ್ತಾರೆ ಎಂಬ ಮಾಹಿತಿ ಕಲೆಹಾಕಿ ನಂತರ ತನ್ನ ಸಹಚರರೊಂದಿಗೆ ಸೇರಿ ದರೋಡೆಗೆ ಸ್ಕೆಚ್ ಹಾಕಿದ್ದ. ಟಿಪ್ಪು ಸುಲ್ತಾನ್ ಚಿನ್ನ ಖರೀದಿಗೆ ತೆರಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಹಿಂಬಾಲಿಸಿ ಕೃತ್ಯ ಎಸಗಿದ್ದ. ತನಿಖೆ ವೇಳೆ ಟಿಪ್ಪು ಸುಲ್ತಾನ್ ಮತ್ತು ಮಳಿಗೆ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಜಯಣ್ಣನ ಮೇಲೆ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ, ಆತನ ಮೊಬೈಲ್ ಸಂಖ್ಯೆ ನೆಟ್ವರ್ಕ್ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಇದರಿಂದ ಅನುಮಾನ ಮತ್ತಷ್ಟು ಬಲವಾಗಿ ಜಯಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement