
ಬೆಂಗಳೂರು: ಸಿನಿಮಾ ನೋಡಿಕೊಂಡು ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಕನಕಪುರ ಮುಖ್ಯರಸ್ತೆ ಸಾರಕ್ಕಿ ಸಿಗ್ನಲ್ ಬಳಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ದರೋಡೆ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಸೇರಿ ನಾಲ್ವರನ್ನು ಕುಮಾರಸ್ವಾಮಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ 2ನೇ ಹಂತ ಯಾರಬ್‍ನಗರದ ದಿಲೀಪ ಅಲಿಯಾಸ್ ದಿಲ್ಲು (22), ಭವಾನಿನಗರದ ಮಹಮದ್(19) ಬಂಧಿತರು. ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದವರು. ಮೇ 1ರ ರಾತ್ರಿ 9.15ರ ಸುಮಾರಿಗೆ ಪ್ರಗತಿಪುರದ ನಾಗರಾಜು(27) ಅವರು ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡಿಕೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ, ಅಡ್ಡಗಟ್ಟಿದ್ದ ಆರೋಪಿಗಳು ಪಕ್ಕಕ್ಕೆ ಎಳೆದೊಯ್ದು ಚಾಕುವಿನಿಂದ ಇರಿದು ಮೊಬೈಲ್ ಮತ್ತು ಹಣ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ನಾಗರಾಜು ಕುಮಾರಸ್ವಾಮಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ, ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಬನಶಂಕರಿಯ ಸರಬಂಡೇಪಾಳ್ಯದ ಮಂಜುನಾಥ ಬಾರ್ ಸಮೀಪ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ರು.1 ಲಕ್ಷ ಮೌಲ್ಯದ 11 ಮೊಬೈಲ್ ಫೋನ್ ಹಾಗೂ ಒಂದು ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ದಿಲೀಪ 2013ರಲ್ಲಿ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ 3 ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement