ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಬರೋಬ್ಬರಿ ಒಂದು ವರ್ಷದ ಹಿಂದೆ ಬಾಣಸವಾಡಿ ಸಮೀಪದ ಕಾಚರಕನಹಳ್ಳಿಯಲ್ಲಿ ನಡೆದಿದ್ದ ಒಂಟಿ ವೃದ್ದೆ ಮೇರಿ ಲೂಕೋಸ್(67) ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬರೋಬ್ಬರಿ ಒಂದು ವರ್ಷದ ಹಿಂದೆ ಬಾಣಸವಾಡಿ ಸಮೀಪದ ಕಾಚರಕನಹಳ್ಳಿಯಲ್ಲಿ ನಡೆದಿದ್ದ ಒಂಟಿ ವೃದ್ದೆ ಮೇರಿ ಲೂಕೋಸ್(67) ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಧರ್ಮಪುರಿ ಹಾಗೂ ಕೇರಳದ ಪಾಲಕ್ಕಾಡ್ ಮೂಲದ ತಂಗರಾಜ್, ಪ್ರಭು, ವಿಜಿ ಬಂಧಿತರು. 2014ರ ಏ.29ರಂದು ಆರೋಪಿ ಗಳು ಕಾಚರಕನಹಳ್ಳಿಯಲ್ಲಿರುವ ಜ್ಯೋತಿ ಶಾಲೆ ಸಮೀಪ ವಾಸವಿದ್ದ ಮೇರಿ ಅವರ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. 8 ವರ್ಷದ ಹಿಂದೆ ಪತಿ ಮೃತಪಟ್ಟ ಬಳಿಕ ಎರಡಂತಸ್ತಿನ ಕಟ್ಟಡದಲ್ಲಿ ಒಂಟಿಯಾಗಿದ್ದ ಮೇರಿ, ಐದು ಕೊಠಡಿಗಳ ಪೈಕಿ ಒಂದರಲ್ಲಿ ಅವರು ವಾಸವಿದ್ದು ಉಳಿದ ನಾಲ್ಕು ಕೊಠಡಿಗಳನ್ನು ನಗರಕ್ಕೆ ಬರುವ ತಮಗೆ ಪರಿಚಿತರಾಗಿರುವವರಿಗೆ ಬಾಡಿಗೆ ನೀಡುತ್ತಿದ್ದರು.

ಅವರಿಂದ ದಿನಕ್ಕೆ ರು.250ರಿಂದ ರು.300 ಬಾಡಿಗೆ ಪಡೆಯುತ್ತಿದ್ದರು. ಮೇರಿ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರತ್ಯೇಕವಾಗಿ ವಾಸವಿದ್ದರು. ಏ.29ರಂದು ಬೆಳಗ್ಗೆ ಕೇರಳ ಮೂಲದ ಇಬ್ಬರು
ಹುಡುಗರು ಕೊಠಡಿಗೆ ಬಂದಿದ್ದರು. ಒಂದು ತಾಸಿನ ಬಳಿಕ ಇಬ್ಬರು ಹೊರಗೆ ಹೋಗಿದ್ದರು. ಮತ್ತೆ 1.30ರ ಸುಮಾರಿಗೆ ಕೊಠಡಿಗೆ ವಾಪಸ್ ಬಂದು ಕೀಲಿಯನ್ನು ಮೇರಿ ಅವರ ಕೈಗೆ ನೀಡಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಸ್ ಬಂದಾಗ ಕೊಠಡಿಯಲ್ಲಿ ಮೇರಿ ಕೊಲೆಯಾಗಿ ಬಿದ್ದಿದ್ದರು. ಆರೋಪಿಗಳು ಮೇರಿ ಅವರನ್ನು ಹತ್ಯೆ ಗೈದ ನಂತರ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬಂಧಿತ ಆರೋಪಿಗಳು ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಬಂಧನದಿಂದ ವರ್ತೂರಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ವಿಚಾರಣೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com