ಅನಾಥೆ ಜ್ಯೋತಿಗೆ ಬೆಳಕಾದ ಗಿರೀಶ್

ಮಹಿಳಾ ನಿಲಯದ ಸದಸ್ಯೆ ಅನಾಥೆ ಜ್ಯೋತಿ ಹಾಗೂ ಚಿಂಚೋಳಿಯ ಗಿರೀಶ್ ಕುಲಕರ್ಣಿ ಇಬ್ಬರು ಹಸೆಮಣೆ ಏರಿ ವಿವಾಹ ಬಂಧನಕ್ಕೊಳಗಾದರು....
ಜ್ಯೋತಿ ಮತ್ತು ಗಿರೀಶ್ ಕುಮಾರ್
ಜ್ಯೋತಿ ಮತ್ತು ಗಿರೀಶ್ ಕುಮಾರ್

ಕಲಬುರಗಿ: ಇಲ್ಲಿನ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ಮದುವೆ ಸಂಭ್ರಮ. ಮಹಿಳಾ ನಿಲಯದ ಸದಸ್ಯೆ ಅನಾಥೆ ಜ್ಯೋತಿ ಹಾಗೂ ಚಿಂಚೋಳಿಯ ಗಿರೀಶ್ ಕುಲಕರ್ಣಿ ಇಬ್ಬರು ಹಸೆಮಣೆ ಏರಿ ವಿವಾಹ ಬಂಧನಕ್ಕೊಳಗಾದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ಗ್ರಾಮದ ಜ್ಯೋತಿ (25) ಮತ್ತು ಚಿಂಚೋಳಿ ತಾಲೂಕಿನ ಕೊರವಿ ಗ್ರಾಮದ ಬ್ರಾಹ್ಮಣ ಕುಟುಂಬದ ರಾಘವೇಂದ್ರ ಕುಲಕರ್ಣಿ ಅವರ ಮಗ ಗಿರೀಶ್ ಕುಮಾರ್ (45) ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಎಸ್‌ಎಸ್‌ಎಲ್‌ಸಿ ತನಕ ವಿದ್ಯಾಭ್ಯಾಸ ಮಾಡಿರುವ ಗಿರೀಶ್ ಕುಮಾರ್, ತಮ್ಮದೇ ಗ್ರಾಮದ ಶ್ರೀ ಭವಾನಿ ಮಿನರಲ್‍ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಮಾಸಿಕ 19,000 ರೂ. ವೇತನ ಪಡೆಯುತ್ತಿದ್ದಾರೆ. ಗಿರೀಶ್ ಕುಮಾರ್ ಮತ್ತು ಜ್ಯೋತಿ ಅವರ ಸಂಪೂರ್ಣ ಒಪ್ಪಿಗೆಯ ಬಳಿಕ ಮಹಿಳಾ ನಿಲಯದಲ್ಲಿ ವಿವಾಹ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಶಂಕರ ಬಾಣಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಕೆ.ನೀಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಮಕೃಷ್ಣ ಟಿ.ಪಡಗಣ್ಣನವರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ ಮುಂತಾದವರು ವಿವಾಹಕ್ಕೆ ಸಾಕ್ಷಿಯಾಗಿದ್ದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ಗ್ರಾಮದ ವೀರಭದ್ರಪ್ಪ ಅವರ ಪುತ್ರಿ ಜ್ಯೋತಿ ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಮೊದಲು ಬೆಳಗಾವಿ ಜಿಲ್ಲೆಯ ಅಥಣಿಯ ರಾಜ್ಯ ಮಹಿಳಾ ನಿಲಯದಲ್ಲಿದ್ದ ಜ್ಯೋತಿ 2010ರ ಜೂನ್ 18ರಿಂದ ಕಲಬುರಗಿ ಮಹಿಳಾ ನಿಲಯದಲ್ಲಿದ್ದಳು.

'ಜ್ಯೋತಿಯ ಜೊತೆ ವಿವಾಹವಾಗಲು ಕುಟುಂಬದವರ ವಿರೋಧವಿಲ್ಲ. ಮನೆಯಲ್ಲಿ ಇಬ್ಬರು ಅಣ್ಣ ತಮ್ಮಂದಿರು ಹಾಗೂ ಓರ್ವ ತಂಗಿಯಿದ್ದು, 12 ಎಕರೆ ಜಮೀನಿದೆ. ಜ್ಯೋತಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ' ಎಂದು ಹೇಳುತ್ತಾರೆ ಗಿರೀಶ್ ಕುಮಾರ್.

ರಾಜ್ಯ ಮಹಿಳಾ ನಿಲಯದಿಂದ 2005-06 ರಿಂದ 2014-15ರವರೆಗೆ ಒಟ್ಟು 11 ಮದುವೆಗಳನ್ನು ಮಾಡಿದ್ದು, ಜ್ಯೋತಿ ಮತ್ತು ಗಿರೀಶ್ ಕುಮಾರ್ ಅವರದ್ದು 12ನೇ ಮದುವೆ. ಮದುವೆಯ ಬಳಿಕ 3 ವರ್ಷದವರೆಗೆ ಅವರ ಕುಟುಂಬದ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ನಿಲಯ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com