ಬೆಂಗಳೂರು: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟಿದ್ದ ವಿಹೆಚ್‍ಪಿ ಕಾರ್ಯದರ್ಶಿ ಕುಟ್ಟಪ್ಪ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ.
ಮಡಿಕೇರಿಯಲ್ಲಿ ನಡೆದ ಘರ್ಷಣೆ ಹಾಗೂ ಕುಟ್ಟಪ್ಪ ಸಾವಿನ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ ಅವರು, ಕುಟ್ಟಪ್ಪ ಸಾವಿನ ಕುರಿತಂತೆ ಗೊಂದಲದ ಹೇಳಿಕೆಗಳು ಕೇಳಿಬರುತ್ತಿರುವುದರಿಂದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಬಿಜೆಪಿ ಇದೇ ನವೆಂಬರ್ 13 ರಂದು ಬಂದ್ ಗೆ ಕರೆ ನೀಡಿದ್ದು, ಬಂದ್ ನೀಡಿರುವ ಕರೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳು ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಆಚರಿಸಲು ನಿರ್ಧರಿಸಿದ್ದ ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ನಿನ್ನೆ ಕೊಡಗು ಬಂದ್ ಗೆ ಕರೆ ನೀಡಿದ್ದವು. ಇದರಂತೆ ನಿನ್ನೆ ಮಡಿಕೇರಿಯ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರತಿಭಟನೆ ವೇಳೆ ಘರ್ಷಣೆಗಳು ನಡೆದಿದ್ದವು. ಘರ್ಷಣೆಯಲ್ಲಿ ನಡೆದ ಕಲ್ಲುತೂರಾಟದಲ್ಲಿ ವಿಹೆಚ್ ಪಿ ಮುಖಂಡ ಕುಟ್ಟಪ್ಪ ಸಾವನ್ನಪ್ಪಿದ್ದರು.
ಇದಲ್ಲದೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ರಾಜು ಎಂಬ ವ್ಯಕ್ತಿ ಪ್ರತಿಭಟನೆ ನೋಡಲೆಂದು ಬಂದ ವೇಳೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.