
ಬೆಂಗಳೂರು: ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನ.14ರಿಂದ 20ರವರೆಗೆ `ಚೈಲ್ಡ್ ಲೈನ್ ಸೇ ದೋಸ್ತಿ' ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಚೈಲ್ಡ್‍ಲೈನ್ ನಿರ್ದೇಶಕಿ ಶೈಲಾ ದೇವರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಚೈಲ್ಡ್ ಲೈನ್ 1098 ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಾದ ಅಪ್ಸಾ, ಬಾಸ್ಕೋ ಹಾಗೂ ಸಿಆರ್‍ಟಿ ಸಂಯುಕ್ತಾಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಮಕ್ಕಳ ರಕ್ಷಣೆಯ ಉಚಿತ ಸಹಾಯವಾಣಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಚಾಮರಾಜಪೇಟೆಯ ಬಾಸ್ಕೋ ಮನೆಯಲ್ಲಿ ನ.14ರ ಬೆಳಗ್ಗೆ 10ಕ್ಕೆ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಉದ್ಘಾಟನೆಯಾಗಲಿದೆ. ನ.14ರಂದು ಮಕ್ಕಳ ರಕ್ಷಣೆ ಕುರಿತು ಪ್ರಮಾಣ ವಚನ ಸ್ವೀಕಾರ, ಕಬ್ಬನ್ ಪಾರ್ಕ್‍ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಚೈಲ್ಡ್‍ಲೈನ್ ಸಪ್ತಾಹದ ಫ್ರೆಂಡ್ಸಿಪ್ ಬ್ಯಾಂಡ್ ಕಟ್ಟುವುದು, ನ.15ರಂದು ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುವ ಭಾರತ-ದಕ್ಷಿಣ ಆಫ್ರಿಕಾ ತಂಡದ ಟೆಸ್ಟ್ ಪಂದ್ಯಾವಳಿಯಲ್ಲಿ, ನ.16ರಂದು ನಗರ ರೈಲು ನಿಲ್ದಾಣ, ಮೆಜೆಸ್ಟಿಕ್‍ನಲ್ಲಿ ಚೈಲ್ಡ್‍ಲೈನ್ ಕುರಿತು ಜಾಗೃತಿ ಕಾರ್ಯಕ್ರಮ, ನ.17ರಂದು ಎಂಎಸ್‍ಡಬ್ಲೂ ಕಾಲೇಜಿನಲ್ಲಿ ಬಿಕ್ಷಾಟನೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಸರ್ಕಾರ ಮತ್ತು ಸಮುದಾಯದ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಚೈಲ್ಡ್‍ಲೈನ್ ನಿರ್ದೇಶಕ ಎಂ.ವಿ.ಜಾಯ್ ಹಾಗೂ ನಾಗಸಿಂಹ ಜಿ.ರಾವ್ ಇದ್ದರು.
Advertisement