
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ರಾಜ್ಯ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳಿಗೆ ಸಚಿವರು ಈ ಭರವಸೆ ನೀಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನ ಬದಲಾಗಿ ಟಿಪ್ಪುವಿನ ಹೆಸರನ್ನು ಇಡಬೇಕಿತ್ತು ಎಂಬ ಗಿರೀಶ್ ಕಾರ್ನಾಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಸದಾನಂದ ಗೌಡರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರ ನೇತೃತ್ವದಲ್ಲಿ ಸಚಿವ ಅನಂತಕುಮಾರ್ ಅವರ ನಿವಾಸಕ್ಕೆ ತೆರಳಿದ ಕಾರ್ಯಕರ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ದೇವನಹಳ್ಳಿ ಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಿ ಗೌರವಿಸಿದೆ. ಆದರೆ, ಸಾಹಿತಿ ಗಿರೀಶ್ ಕಾರ್ನಾಡರು ಕೆಂಪೇಗೌಡರ ಹೆಸರನ್ನು ಬದಲಿಸಿ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಈ ರೀತಿಯ ನಿರ್ಣಯ ಕೈಗೊಳ್ಳದಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದರು.
ನಿಯೋಗ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಅನಂತಕುಮಾರ್, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್ ಮೊದಲಾದ ನಾಯಕರು ಬೆಂಗಳೂರಿ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ಕಾಳಜಿ ವಹಿಸಿದ್ದರು, ಕರ್ನಾಟಕದ ಎರಡೂ ಸದನಗಳು ಈ ವಿಚಾರವಾಗಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದವು.
ಆದರೆ, ಕೆಂಪೇಗೌಡರು ಬೆಂಗಳೂರು, ಕರ್ನಾಟಕ ಮತ್ತು ದೇಶದ ಹೆಮ್ಮೆ ಎಂಬುದನ್ನು ಅರಿಯದ ಗಿರೀಶ್ ಕಾರ್ನಾಡರು ಅಜ್ಞಾನಿಯಂತೆ ಮಾತನಾಡಿದ್ದಾರೆ. ಎಂದು ಅಬಿsಪ್ರಾಯಪಟ್ಟರು. ಕೇಂದ್ರದ ಮೋದಿ ಸರ್ಕಾರ ದೇಶದ ಹೆಮ್ಮೆಯ ಕೆಂಪೇಗೌಡರ ಅಭಿಮಾನದ ಪರವಾಗಿರುತ್ತದೆ. ಯಾವುದೇ ಕಾರಣಕ್ಕೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement