ಕೊಳವೆಬಾವಿ ನೀರಿಗೂ ಕೊಡಬೇಕು ಶುಲ್ಕ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 8,000 ಬೋರ್ ವೆಲ್‍ಗಳಿಗೆ ನಿರ್ವಹಣಾ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು...
ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ (ಸಂಗ್ರಹ ಚಿತ್ರ)
ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 8,000 ಬೋರ್ ವೆಲ್‍ಗಳಿಗೆ ನಿರ್ವಹಣಾ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು.

ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಬಗ್ಗೆ ಚರ್ಚಿಸಲು ಸೋಮವಾರ ಕೌನ್ಸಿಲ್ ಸಭೆ ನಡೆಯಿತು. ಸಭೆಯ ಕೊನೆಯಲ್ಲಿ ಮಾತನಾಡಿದ ವಿಜಯಭಾಸ್ಕರ್, ಕಾವೇರಿ ನೀರು ಲಭ್ಯವಿಲ್ಲದ ಪ್ರದೇಶಗಳಲ್ಲಿ ಬಿಬಿಎಂಪಿಗೆ ಸೇರಿದ ಬೋರ್ ವೆಲ್‍ಗಳಿಂದ ಉಚಿತವಾಗಿ ನೀರು ಪಡೆಯಲಾಗುತ್ತಿದೆ. ಈ ಬೋರ್‍ವೆಲ್‍ಗಳನ್ನು ಜಲಮಂಡಳಿಯೇ ನಿರ್ವಹಣೆಗೆ ತೆಗೆದುಕೊಳ್ಳಲಿದೆ. ಮೊದಲ ಹಂತದಲ್ಲಿ ಬೋರ್‍ವೆಲ್‍ಗಳಿಗೆ ಮೀಟರ್ ಅಳವಡಿಸಲಾಗುವುದು. ನಂತರ ನಿರ್ವಹಣಾ ವೆಚ್ಚವನ್ನು ಮಾತ್ರ ಭರಿಸಕೊಳ್ಳಲಾಗುವುದು. ಆದರೆ ಬೋರ್ ವೆಲ್‍ನಿಂದ ಪಡೆಯುವ ನೀರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಬೋರ್‍ವೆಲ್ ನೋಡಿಕೊಳ್ಳುವ ಸಿಬ್ಬಂದಿ ವೇತನ ಹಾಗೂ ವಿದ್ಯುತ್ ವೆಚ್ಚಕ್ಕೆ ಮಾತ್ರ ನಿರ್ವಹಣಾ ವೆಚ್ಚವನ್ನು ಸಾರ್ವಜನಿಕರು ಭರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‍ನ ರಾಜಣ್ಣ, ಹಲವು ವಾರ್ಡ್‍ಗಳಲ್ಲಿ ಜಲಮಂಡಳಿಯಿಂದ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊದಲು ಕಾವೇರಿ ನೀರು ಪೂರೈಸಿ ನಂತರ ಅಗತ್ಯವಿದ್ದರೆ ಬೋರ್‍ವೆಲ್ ನೀರಿಗೆ ನಿರ್ವಹಣಾ ಶುಲ್ಕ ವಿಧಿಸಬಹುದು ಎಂದರು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಜಲಮಂಡಳಿ ಅಧಿಕಾರಿ ಗಳು ಜನರ ಮೇಲೆ ಶುಲ್ಕ ವಿಧಿಸಿ ಆದಾಯ ಸಂಗ್ರಹಿಸುವ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಪ್ರಸ್ತುತ ಇರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸೋರಿಕೆ ತಡೆದರೆ, ಸಮರ್ಪಕ ನೀರು: ಸಭೆ ಆರಂಭದಲ್ಲಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಮಾತನಾಡಿ, ಬೆಂಗಳೂರಿನಲ್ಲಿ ಸುಮಾರು 1.10 ಕೋಟಿ ಜನಸಂಖ್ಯೆಯಿದ್ದು, 1500 ದಶಲಕ್ಷ ಎಂಎಲ್‍ಡಿ ನೀರು ಪೂರೈಕೆಯಾಗುತ್ತಿದೆ. ಆದರೆ, ಶೇ.70ರಷ್ಟು ನೀರು ಸೋರಿಕೆಯಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಹಾಗಾಗಿ ಸೋರಿಕೆ ತಪ್ಪಿಸಿದರೆ ಸಮರ್ಪಕವಾಗಿ ಪೂರೈಸಬಹುದು. ಬಹುತೇಕರು ಕುಡಿಯುವ ನೀರಿನಲ್ಲೇ ವಾಹನ ತೊಳೆಯುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು. ನೀರು ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಪಠ್ಯ ಅಳವಡಿಸುವುದು ಉತ್ತಮ. ನೀರು ತೆರಿಗೆ ಬಾಕಿ ಉಳಿಸಿಕೊಂಡವರಿಗೆ ವಿಧಿಸಿರುವ ಬಡ್ಡಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಪದ್ಮನಾಭರೆಡ್ಡಿ, ಜಲಮಂಡಳಿ ಸುಮಾರು 8.70 ಲಕ್ಷ ನೀರಿನ ಸಂಪರ್ಕ ಕೊಟ್ಟಿದೆ. ಇದರಿಂದ ಸಂಗ್ರಹವಾಗುವ ಆದಾಯ, ಬಿಬಿಎಂಪಿಗೆ ಬರುವ ಆದಾಯಕ್ಕೆ ಸಮನಾಗಿದೆ. ಆದರೂ, ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಸುವಲ್ಲಿ ವಿಫಲವಾಗಿದೆ. ಕೆಲವೆಡೆ 15 ದಿನಗಳಿಗೊಮ್ಮೆ ನೀರು ಬರುತ್ತಿದೆ. ಜಲಮಂಡಳಿ ವೈಫಲ್ಯದಿಂದ ಜನರು ಪಾಲಿಕೆಗೆ ದೂರುತ್ತಿದ್ದಾರೆ. ಕಾವೇರಿ ನೀರು ಸೋರಿಕೆಯಿಂದ ಅಪಾರ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ವಿಜಯಭಾಸ್ಕರ್, ಅನಧಿಕೃತ ಹಾಗೂ ಪೈಪ್‍ಲೈನ್‍ಗಳಲ್ಲಿ ಶೇ.50ರಷ್ಟು ನೀರು ಸೋರಿಕೆಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಡಿಸೆಂಬರ್ ಒಳಗೆ ಸೋರಿಕೆಯನ್ನು ಶೇ.30ಕ್ಕೆ ಇಳಿಸಬೇಕು ಎಂದು ಸೂಚಿಸಿದೆ. ಅದರಂತೆ ಸೋರಿಕೆ ತಡೆಯಲು ಸ್ಕಾ ್ವಡ್ ಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರೊರೇಟಾ ಶುಲ್ಕ ವಸೂಲಿ ಮಾಡುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಜಲಮಂಡಳಿ ಅಧ್ಯಕ್ಷರು, ಕಟ್ಟಡಗಳ ಅಂತಸ್ತು ಹೆಚ್ಚಾದರೆ ಪ್ರೊರೇಟಾ ಶುಲ್ಕ ವಿಧಿಸಲಾಗುತ್ತಿದೆ. 7-8 ವರ್ಷದಿಂದ ನೀರಿನ ದರ ಹೆಚ್ಚಿಸಿಲ್ಲ. ಹಾಗಾಗಿ ಈ ಶುಲ್ಕವನ್ನು ಸಿಬ್ಬಂದಿ ಸಂಬಳ ಹಾಗೂ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com