
ಬೆಂಗಳೂರು: ಜವಾಬ್ದಾರಿಯುತ ಮದ್ಯ ಸೇವನೆ ಮತ್ತು ರಸ್ತೆ ಸುರಕ್ಷತೆ ಪ್ರೊತ್ಸಾಹಿಸಲು ಸಾಬ್ ಮಿಲ್ಲರ್ ಇಂಡಿಯಾ ಸಂಸ್ಥೆಯು ನಗರ ಸಂಚಾರ ಪೊಲೀಸ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರಸ್ತೆಯನ್ನು ಗೌರವಿಸಿ ಕುಡಿದು ವಾಹನ ಚಲಾಯಿಸಬೇಡಿ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.
ಮದ್ಯ ಸೇವನೆ ಮಾಡಿದಾಗ ಕ್ಯಾಬ್‍ಗೆ ಕರೆ ಮಾಡುವ, ಡ್ರೈವರ್(ಚಾಫರ್) ಗೊತ್ತು ಮಾಡಿಕೊಳ್ಳುವ ಅಥವಾ ಮದ್ಯ ಸೇವಿಸದ ಸ್ನೇಹಿತರೊಬ್ಬರನ್ನು ಮನೆಗೆ ಬಿಡುವಂತೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸಿ ಸೇವಾ ಸಂಸ್ಥೆ ಓಲಾ ಕ್ಯಾಬ್ಸ್, ಚಾಫರ್ ಬಾಡಿಗೆ ಪಡೆಯುವ ಆ್ಯಪ್‍ಡ್ರೈವ್‍ಯು, ನಗರದ ರೇಡಿಯೋಸಿಟಿ, ಪಾಸಿಟಿವ್ ಸ್ಟ್ರೋಕ್ಸ್ ಸಂಸ್ಥೆಗಳ ಪಾಲುದಾರಿಕೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.
ಡಿಜಿಟಲ್ ಅಭಿಯಾನ ಮತ್ತು ರೇಡಿಯೋಸಂದೇಶ ಬಳಕೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ನಗರದ 50 ಜನಪ್ರಿಯ ಸ್ಥಳಗಳು, ಬಾರ್ಗಳು, ಪಬ್‍ಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ವಿನೂತನ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಗುವುದು. ಮುಂದಿನ ದಿನಗಳಲ್ಲಿ ಬೀದಿನಾಟಕ ಹಾಗೂ ಆನ್‍ಲೈನ್ ಸ್ಪರ್ಧೆಗಳನ್ನು ಏರ್ಪಡಿಸಿ ನಗರದ ಜನತೆಯನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುವುದೆಂದು ಹೇಳಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Advertisement