
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೆ.ಸಿ.ರಸ್ತೆಯ ಕಾರ್ಪೊರೇಶನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ನಾಳೆ ಎರಡು ವರ್ಷಗಳಾಗುತ್ತಿದೆ. ಆದರೆ ದುರದೃಷ್ಟವಶಾತ್ ಇಲ್ಲಿಯವರೆಗೂ ಆರೋಪಿ ಮಾತ್ರ ಪತ್ತೆಯಾಗಿಲ್ಲ.
ನವೆಂಬರ್. 19 2013ರಂದು ಬೆಳಗ್ಗೆ 7.15 ರ ಸುಮಾರಿಗೆ ಕಾರ್ಪೋರೇಶನ್ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಬಂದಿದ್ದ ಬ್ಯಾಂಕ್ ಅಧಿಕಾರಿ ಜ್ಯೋತಿ ಯಾದವ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜ್ಯೋತಿ ಅವರು ಒಳಗೆ ಹೋಗುತ್ತಿದ್ದಂತೆ ದುಷ್ಕರ್ಮಿಯೊಬ್ಬ ಎಟಿಎಂ ಗೇಟ್ ಎಳೆದು ಹಣಕ್ಕಾಗಿ ಪೀಡಿಸಿದ್ದ. ಜ್ಯೋತಿ ಹಣ ನೀಡಲು ಒಪ್ಪದಿದ್ದಾಗ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ.
ಹಂತಕನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಅವರು ಒಂದು ತಾಸು ಎಟಿಎಂ ಒಳಗೆ ಬಿದ್ದಿದ್ದರು. ಆದರೆ ಯಾರಿಗೂ ಇದು ಗಮನಕ್ಕೆ ಬಂದಿರಲಿಲ್ಲ. ಸುಮಾರು 8 ಗಂಟೆ ಸುಮಾರಿಗೆ ರಕ್ತ ಹರಿದು ಹೊರ ಬಂದಾಗ ಅಲ್ಲಿ ಓಡಾಡುತ್ತಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜ್ಯೋತಿಯವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಸಾವು ಬದುಕಿನ ನಡುವೆ ಓಡಾಡುತ್ತಿದ್ದ ಜ್ಯೋತಿಯವರು ಬದುಕುಳಿದಿದ್ದರು. ಮೂರು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರೀಗ ಆರೋಗ್ಯವಾಗಿದ್ದು, ಬ್ಯಾಂಕ್ ಉದ್ಯೋಗಕ್ಕೆ ಎಂದಿನಂತೆ ಹಾಜರಾಗುತ್ತಿದ್ದಾರೆ.
ಆದರೆ, ಜ್ಯೋತಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆತ ಆಂಧ್ರ ಪ್ರದೇಶದ ಮೂಲದವನೆಂದು ಹೇಳಲಾಗುತ್ತಿದ್ದು, ಕೆಲವು ಮೂಲಗಳ ಪ್ರಕಾರ ಆತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿ ಪತ್ತೆಗಾಗಿ 15 ವಿಶೇಷ ತಂಡಗಳನ್ನು ರಚಿಸಲಾಗಿದ್ದು 400ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಆದರೂ ಇದುವರೆಗೂ ದುಷ್ಕರ್ಮಿ ಮಾತ್ರ ಪತ್ತೆಯಾಗಿಲ್ಲ.
Advertisement