4 ರಾಷ್ಟ್ರಪತಿ ಪದಕ ವಾಪಸಿಗೆ ಮುಂದಾದ ನಿವೃತ್ತ ಯೋಧ

ಕೆಪಿಎಸ್‍ಸಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ನಿವೃತ್ತ ಯೋಧ ಮೇಜರ್ ಜಯ ಪ್ರಕಾಶ್ ತಮಗೆ ದೇಶ ನೀಡಿದ 4 ರಾಷ್ಟ್ರಪತಿ ಪದಕದ ಗೌರವವನ್ನು ಹಿಂತಿರುಗಿಸಿದ್ದಾರೆ...
ರಾಷ್ಟ್ರಪತಿ ಪದಕ ಹಿಂದುರಿಗಿಸಿದ ಮೇಜರ್ ಜಯ ಪ್ರಕಾಶ್ (ಸಂಗ್ರಹ ಚಿತ್ರ)
ರಾಷ್ಟ್ರಪತಿ ಪದಕ ಹಿಂದುರಿಗಿಸಿದ ಮೇಜರ್ ಜಯ ಪ್ರಕಾಶ್ (ಸಂಗ್ರಹ ಚಿತ್ರ)

ಬೆಂಗಳೂರು: ಕೆಪಿಎಸ್‍ಸಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ನಿವೃತ್ತ ಯೋಧ ಮೇಜರ್ ಜಯ ಪ್ರಕಾಶ್ ತಮಗೆ ದೇಶ ನೀಡಿದ 4 ರಾಷ್ಟ್ರಪತಿ ಪದಕದ ಗೌರವವನ್ನು ಹಿಂತಿರುಗಿಸಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹೋರಾಡುವುದೂ ಸೇರಿದಂತೆ ವಿವಿಧ ಸೇನಾ ಕಾರ್ಯಾಚರಣೆಗಳಲ್ಲಿ ಅವರು ತೋರಿದ ಸಾಹಸಕ್ಕೆ ರಾಷ್ಟ್ರಪತಿ ಪದಕಗಳು ದೊರೆತಿತ್ತು. ಕೆಪಿಎಸ್ಸಿಯಿಂದ 4 ಸಲ ನಡೆದ ಕೆಎಎಸ್ ಪರೀಕ್ಷೆ ಬರೆದು, ಎರಡು ಬಾರಿ ಸಂದರ್ಶನದಲ್ಲಿ ಲಂಚದ ಸವಾಲು ಎದುರಿಸಿದ ಅವರು ಈಗ ಮನನೊಂದು ದೇಶ ಕೊಟ್ಟ ಗೌರವವನ್ನು ದೇಶಕ್ಕೇ ವಾಪಸ್ ಕೊಡುತ್ತೇನೆ ಎಂದಿದ್ದಾರೆ. ಕಳೆದ  2001ರಲ್ಲಿ ಸೇನೆಗೆ ಸೇರಿ 8 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಅವರು ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಈ ನಡುವೆ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರೂ, ಸಂದರ್ಶ ನದ ವೇಳೆ ಲಂಚ ನೀಡಲಿಲ್ಲವೆಂದು ತಿರಸ್ಕೃತರಾಗಿದ್ದಾರೆ.

ದೇಶದ ಒಟ್ಟು ಭ್ರಷ್ಟತೆಗೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದು, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಅವರು ಆಡಿದ ಮಾತುಗಳು...

ಸೇನೆಯಿಂದ ನಿವೃತ್ತಿಯಾದ ಬಳಿಕ 200809 ನೇ ಸಾಲಿನಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ಬರೆದು ಉತ್ತೀರ್ಣನಾದೆ. ಸಂದರ್ಶನದಲ್ಲಿ `ಫೀಲ್ಡ್ ಮಾರ್ಷಲ್ ಎಷ್ಟು ಮಂದಿಯಿದ್ದಾರೆ?' ಎಂಬ ಒಂದೇ ಪ್ರಶ್ನೆ ಕೇಳಿದರು. ಅದಕ್ಕೆ ನಾನು ಸರಿಯಾದ ಉತ್ತರ ನೀಡಿದೆ. ಇದೊಂದೇ ಪ್ರಶ್ನೆ ಕೇಳಿದ ಬಳಿಕ ನಿಮ್ಮ ಸಂದರ್ಶನ ಮುಗಿಯಿತು ಎಂದರು. ನಂತರ ಹೊರಗಿದ್ದ ಕೆಪಿಎಸ್ ಸಿಯ ಸದಸ್ಯರೊಬ್ಬರು, `ನೀವು  25 ಲಕ್ಷ ನೀಡಿದರೆ ತಹಸೀಲ್ದಾರ್ ಆಗಬಹುದು' ಎಂದರು. ಆದರೆ ನಾನು, `ಪ್ರಾಮಾಣಿಕರಾಗಿರಿ ಎಂದು ಸೇನೆ ನಮಗೆ ಕಲಿಸಿಕೊಟ್ಟಿದೆ, ಹೀಗಾಗಿ ಲಂಚ ನೀಡುವುದಿಲ್ಲ' ಎಂದು ಹೇಳಿ ನಿರಾಕರಿಸಿದೆ.  ನಂತರ ವಿಪ್ರೊ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದೆ. 2011ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣನಾಗಲಿಲ್ಲ.

2012ರಲ್ಲಿ ಬರೆದು ಸಂದರ್ಶನಕ್ಕೆ ಹಾಜರಾದಾಗ, `ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ?' ಎಂಬ ಒಂದೇ ಪ್ರಶ್ನೆ ಕೇಳಿ ಸುಮ್ಮನಾದರು. ಹೊರಗೆ ಬಂದರೆ ಕೆಪಿಎಸ್‍ಸಿ ಸದಸ್ಯರೊಬ್ಬರು, `30 ಲಕ್ಷ ನೀಡಿದರೆ ಕೆಲಸ ಸಿಗುತ್ತದೆ' ಎಂದರು. ನಾನು ಇದನ್ನೂ ತಿರಸ್ಕರಿಸಿ ಬಂದೆ. ಕಳೆದ 2015 ನೇ ಸಾಲಿನ ಪರೀಕ್ಷೆಯನ್ನೂ ಬರೆದಿದ್ದೇನೆ. ಆದರೆ ಇತ್ತೀಚೆಗೆ ಕೆಪಿಎಸ್‍ಸಿ ಕುರಿತ ವರದಿಯೊಂದನ್ನು ಓದಿದ  ಬಳಿಕ ಈ ಬಾರಿಯ ಸಂದರ್ಶನಕ್ಕೆ ಹಾಜರಾಗುವ ಆಸಕ್ತಿ ಕಳೆದುಕೊಂಡಿದ್ದೇನೆ. ಇದಕ್ಕೆ ರಾಜ ಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಕಾರಣರಾಗಿದ್ದಾರೆ. ಕೆಪಿಎಸ್ಸಿಯೊಂದರಲ್ಲೇ ಇಷ್ಟೊಂದು  ಭ್ರಷ್ಟಾಚಾರವೆಂದರೆ ಇನ್ನು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಎಷ್ಟು ಭ್ರಷ್ಟಾಚಾರವಿದೆ? ಸಮೈನಿಕರು ದೇಶವನ್ನು ತಾಯಿ ಎಂದು ತಿಳಿದು ಕೆಲಸ ಮಾಡುತ್ತಾರೆ. ಈ ಭಾವನೆ ರಾಜಕಾರಗಳಲ್ಲಿ ಏಕಿಲ್ಲ? ನನಗೆ ಕೆಲಸ ಸಿಗಲಿಲ್ಲವೆಂದು ನಾನು ಪದಕ ವಾಪಸ್ ಮಾಡುತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಲಂಚಗುಳಿತನದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಬದಲಾಗಬೇಕಿದೆ. ಇಷ್ಟೆಲ್ಲಾ ದೇಶ ಸೇವೆ ಮಾಡಿಯೂ ಸಮೈನಿಕರಿಗೆ ಗೌರವವಿಲ್ಲ.

ಈ ಎಲ್ಲ ಕಾರಣಗಳಿಂದ ಪದಕ ಹಿಂತಿರುಗಿ ಸುತ್ತಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಯಾವುದೇ ಒತ್ತಡಗಳಿಂದ ನಾನು ತೀರ್ಮಾನ ಕೈಗೊಂಡಿಲ್ಲ. ರಾಜ್ಯಪಾಲರಿಗೆ ಪತ್ರ ಬರೆದಿದ್ದು,  ಅವರ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಮಾತು ಮುಗಿಸಿ ಹೊರಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com