ವಾಹನ ದಟ್ಟಣೆಗೆ, ಪಟ್ಟಣ ಬಿಡುತ್ತಿವೆ ಸಂಸ್ಥೆಗಳು

ನಗರದ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಒಳಗಾಗಿರುವ ಎಂಜಿನಿಯರ್ ಗಳ ಸಮಸ್ಯೆ ಬಗೆಹರಿಸಲು ಬೃಹತ್ ಕಂಪನಿಗಳೇ ವಲಸೆ ಹೊರಟಿವೆ!...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಒಳಗಾಗಿರುವ ಎಂಜಿನಿಯರ್ ಗಳ ಸಮಸ್ಯೆ ಬಗೆಹರಿಸಲು ಬೃಹತ್ ಕಂಪನಿಗಳೇ ವಲಸೆ ಹೊರಟಿವೆ!

ಹೌದು ನಗರದ ವಾಹನ ದಟ್ಟಣೆ ತನ್ನ ಉದ್ಯೋಗಿ ಎಂಜಿನಿಯರ್ ಗಳಿಗೆ ಬದುಕಲು ಸೂಕ್ತವಾದ ಸ್ಥಳವಲ್ಲ ಎಂಬ ಗಮನಾರ್ಹ ಅಂಶ ಪತ್ತೆಹಚ್ಚಿರುವ ಸಂಸ್ಥೆಗಳು, ಹೊಸ ಉದ್ಯಮಗಳನ್ನು ನಗರದ ಹೊರಭಾಗದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಆರಂಭಿಸಲು ಉತ್ಸುಕವಾಗಿವೆ. ಎಲೆಕ್ಟ್ರಾನಿಕ್ ಸಿಟಿಯ ಐಟಿಪಿಎಲ್ ಹಾಗೂ ಆರ್ ಎಂಜೆಡ್ ಇಕೋಸ್ಪೇಸ್‍ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ವಾಹನ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು, ಇದು ನಿತ್ಯ ಜೀವನದ ಮೇಲೂ ಪರಿಣಾಮ ಬೀರಿದೆ.   

ಬೆಳಗ್ಗೆ ದಟ್ಟಣೆಯಿಂದಾಗಿ ಕಚೇರಿಗೆ ತಡವಾಗಿ ಆಗಮಿಸುವ ಉದ್ಯೋಗಿಗಳು ಮರಳಿ ಹೋಗುವಾರ ಬೇಗನೆ ಹೊರಡುತ್ತಾರೆ. ಆದರೂ ವಾಹನ ದಟ್ಟಣೆಯಿಂದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಹೀಗಾಗಿ ಕಚೇರಿಯ ಸಮಯ ಹಾಗೂ ಮನೆಯಲ್ಲಿ ಕುಟುಂಬ ವರ್ಗದೊಂದಿಗೆ ಕಳೆಯುವ ಹೆಚ್ಚಿನ ಸಮಯ ಟ್ರಾಫಿಕ್‍ನಲ್ಲಿ ವ್ಯರ್ಥವಾಗುತ್ತಿದೆ. ತಮ್ಮ ಉದ್ಯೋಗಿಗಳು ಬದುಕಲು ಬೆಂಗಳೂರು ಸೂಕ್ತ ಸ್ಥಳವಲ್ಲ ಎಂದು ಕಂಡುಕೊಂಡಿರುವ ಸಂಸ್ಥೆಗಳು ಹೊಸ ಉದ್ಯಮ ಆರಂಭಿಸಲು ಬೇರೆ ನಗರಗಳಿಗೆ ಆದ್ಯತೆ ನೀಡುತ್ತಿವೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಗ್ಲೋಬಲ್ ಕ್ವೆಸ್ಟ್ ಸಂಸ್ಥೆ ನಗರದ ಹೊರವಲಯದಲ್ಲಿ ಎರಡು ಅತಿ ದೊಡ್ಡ  ಉದ್ಯಮ ಹೊಂದಿದೆ. ಸುಮಾರು 3,000 ಮಂದಿಗೆ ಉದ್ಯೋಗ ನೀಡಿದ ಈ ಸಂಸ್ಥೆ ಈಗ ತನ್ನ ಮುಂದಿನ ಹೊಸ ಕಚೇರಿಯನ್ನು ತಿರುವನಂತರಪುರದಲ್ಲಿ ತೆರೆಯಲು ನಿರ್ಧರಿಸಿದೆ.

ನಗರದಲ್ಲಿ ಉದ್ಯಮ ಆರಂಭಿಸಲು ಎಲ್ಲ ಸೌಕರ್ಯ ಹೊಂದಿದ್ದರೂ, ಮತ್ತೊಂದು ರಾಜ್ಯದಲ್ಲಿ ಆರಂಭಿಸಲು ಇಲ್ಲಿನ ವಾಹನ ದಟ್ಟಣೆಯೇ ಕಾರಣವಾಗಿದೆ.ವಾಹನ ದಟ್ಟಣೆಯಲ್ಲಿ ನಿತ್ಯ  ಸಿಲುಕಿ ಉದ್ಯೋಗ ಮಾಡುತ್ತಿರುವವರ ಪಾಡು ಗಮನಿಸಿರುವ ಸಂಸ್ಥೆ ಈಗ ವಾಹನ ದಟ್ಟಣೆ ಕಡಿಮೆಯಿರುವ ತಿರುವಂತಪುರವೇ ಹೊಸ ಶಾಖೆಗೆ ಸೂಕ್ತ ಎಂದು ತೀರ್ಮಾನಿಸಿದೆ. ಈ ಉದ್ಯಮದಲ್ಲಿ ಸುಮಾರು 1,000 ಮಂದಿ ಉದ್ಯೋಗ ಪಡೆಯಲಿದ್ದಾರೆ. ``ಹಲವು ಗಂಟೆಗಳ ಕಾಲ ನಿರಂತರವಾಗಿ ವಾಹನ ಚಲಾಯಿಸುವುದರಿಂದ ಉದ್ಯೋಗಿಗಳು ನಿತ್ರಾಣರಾಗುತ್ತಿದ್ದಾರೆ.

ಉದ್ಯೋಗದಲ್ಲಿ ಏಕಾಗ್ರತೆ ಹಾಗೂ ಕುಟುಂಬದ ಸಂತಸ ಎರಡನ್ನೂ ಅನುಭವಿಸಲಾರದೆ ಉದ್ಯೋಗಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ವಾಹನ ದಟ್ಟಣೆಯಿಂದಾಗಿಯೇ ಇಂತಹ ಸಮಸ್ಯೆ ಸೃಷ್ಟಿಯಾಗಿದೆ'' ಎನ್ನುವುದು ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಅಜಯ್ ಪ್ರಭು ಅವರ ನುಡಿ. ದಟ್ಟಣೆ ಏಕೆ ಹೀಗೆ?: ನಗರದ ಪ್ರಮುಖ ಕೈಗಾರಿಕಾ ಪ್ರದೇಶವಾದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಆರ್ ಎಂಜೆಡ್ ಇಕೋಸ್ಪೇಸ್ ಪ್ರವೇಶವಾಗುವಾಗಲೇ ವಾಹನ ದಟ್ಟಣೆ ಆರಂಭವಾಗುತ್ತದೆ. ಇಲ್ಲಿನ ಪ್ರದೇಶದಲ್ಲಿ ರಸ್ತೆ ಮಾರ್ಗಗಳು ವಾಹನಗಳ ಸಂಖ್ಯೆಗೆ ಅನುಗುಣವಾಗಿಲ್ಲ. ಉತ್ತಮ ರಸ್ತೆ ಸಂಪರ್ಕ ಯೋಜನೆಗಳು ಇನ್ನೂ ಆರಂಭವಾಗಿಲ್ಲ.

ಪ್ರತಿ ವರ್ಷ ಉದ್ಯೋಗಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ವಾಹನಗಳು ಈ ಪ್ರದೇಶಕ್ಕೆ ಹೆಚ್ಚಾಗಿ ಸೇರ್ಪಡೆಯಾಗುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಸಂಪರ್ಕ ಮಾರ್ಗಗಳು ಅಭಿವೃದ್ಧಿಯಾಗಿಲ್ಲ. ಹೀಗಾಗಿ ಕಂಪೆನಿಗಳ ದ್ವಾರದಲ್ಲಿಯೇ ವಾಹನ ದಟ್ಟಣೆ ಸೃಷ್ಟಿಯಾ ಗುತ್ತಿದೆ. ಆರ್‍ಎಂಜೆಡ್ ಇಕೋಸ್ಪೇಸ್‍ನಲ್ಲಿ ಸುಮಾರು 65,000 ಉದ್ಯೋಗಿಗಳಿದ್ದು, ಎಲ್ಲರೂ ಒಂದೇ ಸಮಯದಲ್ಲಿ ಒಂದೇ ದಾರಿಯ ಮೂಲಕ ಹೊರಗೆ ಹೋಗುವುದರಿಂದ ಬೃಹತ್ ದಟ್ಟಣೆ ಏರ್ಪಡುತ್ತಿದೆ ಎಂದು ಕಂಪನಿಗಳ ತಜ್ಞರು ಅಭಿಪ್ರಾಯಪಡುತ್ತಾರೆ.

ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಈ ವಲಯದಿಂದ ಸಾಕಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ದೇಶದ ಎಲ್ಲ ಭಾಗದಿಂದ ಉದ್ಯೋಗಕ್ಕಾಗಿ ಜನರು ಬರುತ್ತಿದ್ದರೂ, ರಸ್ತೆ ಸಂಪರ್ಕ ಅಭಿವೃದ್ಧಿಯಾಗಿಲ್ಲ. ಹೊಸ ಮೇಲ್ಸೇತುವೆ ಹಾಗೂ ರಸ್ತೆ ಅಗಲೀಕರಣ ಯೋಜನೆಯ ಮೂಲಕ ಉದ್ಯೋಗಿಗಳ ಸಮಸ್ಯೆ ನಿವಾರಿಸಬೇಕು ಎಂದು ಅಜಯ್ ಪ್ರಭು ಒತ್ತಾಯಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com