ಉಂಡೂ ಹೋದ ಕದ್ದೂ ಹೋದ !

ಬೀಗರ ಊಟಕ್ಕೆ ಅತಿಥಿಯಂತೆ ಬಂದ ಖದೀಮನೊಬ್ಬ ಮಾಂಸದೂಟ ಸವಿದು ವಧುವರರಿಗೆ ನೆಂಟರಿಷ್ಟರು ನೀಡಿದ್ದ ಉಡುಗೊರೆಯನ್ನೇ ಕದ್ದೊಯ್ದ ಪ್ರಸಂಗವಿದು. ಬಸವೇಶ್ವರ ನಗರ ನಿವಾಸಿಗಳಾದ ವಿನಯïಗೌಡ ಹಾಗೂ ಶ್ರುತಿಯವರ ವಿವಾಹ ಸೆ.20ರಂದು ನೇರವೇರಿತ್ತು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೀಗರ ಊಟಕ್ಕೆ ಅತಿಥಿಯಂತೆ ಬಂದ ಖದೀಮನೊಬ್ಬ ಮಾಂಸದೂಟ ಸವಿದು ವಧುವರರಿಗೆ ನೆಂಟರಿಷ್ಟರು ನೀಡಿದ್ದ ಉಡುಗೊರೆಯನ್ನೇ ಕದ್ದೊಯ್ದ ಪ್ರಸಂಗವಿದು. ಬಸವೇಶ್ವರ ನಗರ ನಿವಾಸಿಗಳಾದ ವಿನಯ್ ಗೌಡ ಹಾಗೂ ಶ್ರುತಿಯವರ ವಿವಾಹ ಸೆ.20ರಂದು ನೇರವೇರಿತ್ತು.

ಸೆ.23ರಂದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಬಂಟ್ ಸಂಘ ರಾಧಬಾಯಿ ತಿಮ್ಮಪ್ಪ ಬಂಡಾರಿ ಸಂಭಾಗಣದಲ್ಲಿ ಬೀಗರ ಊಟ ಏರ್ಪಾಡಾಗಿತ್ತು. ಬೀಗರ ಊಟಕ್ಕೆ ನೂರಾರು ಮಂದಿ ಬಂದಿದ್ದರು. ಮದುವೆ ಮನೆಯವರು ಸಂಭ್ರಮದಲ್ಲಿ ಓಡಾಡುತ್ತಾ, ಬಂದ ಅತಿಥಿಗಳನ್ನು ಮಾತನಾಡಿಸುತ್ತಾ, ಊಟಕ್ಕೆ ಕರೆದೊಯ್ಯುತ್ತಿದ್ದರು. ಅತಿಥಿಗಳು ಉಡುಗೊರೆ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳಲು ವೇದಿಕೆ ಕಡೆ ಹೋಗುತ್ತಿದ್ದರು. ಇದೇ ವೇಳೆ ಖದೀಮರ ತಂಡವೊಂದು ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದೆ. ಅತಿಥಿಗಳಂತೆ ಬಂದಿದ್ದ ಅವರ ಬಗ್ಗೆ ಯಾರೊಬ್ಬರು ಅನುಮಾನ ಪಡಲಿಲ್ಲ.

ಸುಮಾರು ಅರ್ಧ ಗಂಟೆ ಕಾಲ ಸಭಾಂಗಣದಲ್ಲಿ ಓಡಾಡಿದ ಖದೀಮರ ತಂಡದ ಸದಸ್ಯನೊಬ್ಬ , ವಧು-ವರರ ಕಡೆಯವರಿಗೆ ಅತ್ಯಂತ ಆಪ್ತನಂತೆ ವೇದಿಕೆ ಏರಿದ್ದ. ಅಲ್ಲಿದ ವಧುವಿನ ತಂದೆಯನ್ನು ಚೆನ್ನಾಗಿದ್ದಿರಾ ಎಂದು ಮಾತನಾಡಿಸಿದ್ದಾನೆ. ಅಲ್ಲದೇ ವೇದಿಕೆ ಮೇಲೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಅಷ್ಟರಲ್ಲೇ ಸಭಾಂಗಣದಲ್ಲಿ ಕೆಲ ಸೆಕೆಂಡುಗಳ ಕಾಲ ವಿದ್ಯುತ್ ಸಂಪರ್ಕ
ಸ್ಥಗಿತಗೊಂಡಿತ್ತು. ನಗರದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಸಾಮಾನ್ಯ ಎಂದುಕೊಂಡು ಎಲ್ಲರೂ ಮಾತುಕತೆಯಲ್ಲಿ ತೊಡಗಿದ್ದರು. ವಿದ್ಯುತ್ ಮತ್ತೆ ಬಂದಾಗ ಪಕ್ಕದಲ್ಲೇ ಇಟ್ಟಿದ್ದ ವಧು ಶ್ರುತಿ ಅವರ ಮೊಬೈಲ್ ಫೋನ್ ಕಾಣೆಯಾಗಿತ್ತು. ತಂದೆ ಸೇರಿದಂತೆ ಎಲ್ಲರೂ ಮೊಬೈಲ್ ಫೋನ್ ಗಾಗಿ ಹುಡುಕಾಡುತ್ತಿದ್ದರು.

ಅದೇ ವೇಳೆಗೆ ಅತಿಥಿಗಳು ವಧು-ವರರಿಗೆ ನೀಡಿದ್ದ ಉಡುಗೊರೆಗಳ ಪೈಕಿ ಸಣ್ಣ ಸಣ್ಣ ಬಾಕ್ಸ್‍ಗಳು ಕೂಡಾ ಕಾಣೆಯಾಗಿದ್ದವು. ಆಗಲೇ ಮೊಬೈಲ್ ಫೋನ್ ಜತೆಗೆ ಉಡುಗೊರೆಗಳು ಕಳವಾಗಿವೆ ಎನ್ನುವುದು ಗೊತ್ತಾಗಿದ್ದು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮದುವೆ ಮನೆಯಲ್ಲಿ ಹುಡುಕಾಟ ನಡೆಸಲಾಯಿತು. ಅಲ್ಲದೇ ಕಾರ್ಯಕ್ರಮ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ವಿಡಿಯೋ ರಿವೈಂಡ್ ಮಾಡಿ ರಿಪ್ಲೇ ಮಾಡಿದಾಗ ಅತಿಥಿಯಂತೆ ಬಂದು ಮಾತನಾಡಿಸಿದ ದುಷ್ಕರ್ಮಿಯೇ ಕಾಗದದ ಬ್ಯಾಗ್‍ನಲ್ಲಿ ಸುಮಾರು 15 ಸಣ್ಣ ಬಾಕ್ಸ್‍ಗಳನ್ನು ಹಾಕಿಕೊಂಡು ಪರಾರಿಯಾಗುತ್ತಿರುವುದು ಕಾಣಿಸಿದೆ. ಕೂಡಲೇ ವಿನಯ್ ತಂದೆ ಶೇಷಗೌಡ ಅವರು ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಚಂದ್ರ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com