
ಬೆಂಗಳೂರು: ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ರೀತಿಯ ಏರಿಕೆ ಇರುವುದಿಲ್ಲ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಹದೇವಪ್ರಸಾದ್ ಅವರು, ಕೆಎಂಎಫ್ ಹಾಗೂ 13 ಹಾಲು ಒಕ್ಕೂಟಗಳು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಬೇಕು ಎಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಆದರೆ ಪ್ರಸ್ತುತ ಹಾಲು ಒಕ್ಕೂಟಗಳ ಬೇಡಿಕೆಯನ್ನು ತಡೆ ಹಿಡಿಯಲಾಗಿದ್ದು, ಹಾಲಿನ ದರ ಏರಿಕೆ ಮಾಡುವುದು ಬೇಡ ಎಂದು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
"ಕೆಎಂಎಫ್ ನಷ್ಟದಲ್ಲಿಲ್ಲ. ಹಾಲು ಒಕ್ಕೂಟಗಳು ಮಾತ್ರ ನಷ್ಟದಲ್ಲಿದ್ದು, ಹಾಲು ಉತ್ಪಾದಕರಿಗೆ ಒಕ್ಕೂಟಗಳು ಬ್ಯಾಂಕ್ ಗಳಿಂದ ಸಾಲ ಮಾಡಿ ಪಾವತಿ ಮಾಡುತ್ತಿವೆ. ಹಾಲು ಉತ್ಪಾದಕರಿಂದ ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲನ್ನು ಸಂಗ್ರಹಿಸುವುದು ಕಷ್ಟವಾಗಿದೆ ಎಂದು ಕೆಎಂಎಫ್ ಬಳಿ ಒಕ್ಕೂಟಗಳು ತಮ್ಮ ಅಳಲು ತೋಡಿಕೊಂಡಿವೆ. ಈ ಹಿನ್ನಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲ್ಲಿದ್ದು, ಸದ್ಯಕ್ಕಂತೂ ಹಾಲಿನ ದರದಲ್ಲಿ ಯಾವುದೇ ರೀತಿಯ ಏರಿಕೆ ಇಲ್ಲ. ಹಾಲು ಒಕ್ಕೂಟಗಳಲ್ಲಿ ಗುಣಮಟ್ಟದ ಹಾಲು ಸಂಗ್ರಹಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 2 ಸಾವಿರ ಕೋಟಿ ರು.ಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ 74 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 33 ಲಕ್ಷ ಲೀಟರ್ ಹಾಲು ಮಾರಾಟಕ್ಕೆ ವ್ಯವಸ್ಥೆ ಇದೆ. ಉಳಿದ ಹಾಲು ಸಂಗ್ರಹ ಮತ್ತು ಇತರೆ ಉತ್ಪನ್ನಗಳನ್ನು ತಯಾರಿಸಲು ಒಕ್ಕೂಟಗಳು ಮೂಲಸೌಕರ್ಯ ಮಾಡಿಕೊಳ್ಳದಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೆಚ್.ಎಸ್. ಮಹದೇವಪ್ರಸಾದ್ ಅವರು ಹೇಳಿದ್ದಾರೆ.
ನಂದಿನಿ-ಟಿಟಿಡಿ ನಡುವಿನ ಒಪ್ಪಂದ ರದ್ದಾದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹದೇವ ಪ್ರಸಾದ್ ಅವರು, ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಕೆಎಂಎಫ್ ತಯಾರಿಸಿದ ಬೆಣ್ಣೆ ಖರೀದಿ ಮಾಡುವುದನ್ನು ಟಿಟಿಡಿ ಸ್ಥಗಿತಗೊಳಿಸಿರುವುದರಿಂದ ರಾಜ್ಯಕ್ಕೆ ನಷ್ಟವಿಲ್ಲ ಎಂದು ಹೇಳಿದರು.
ಬೆಂಗಳೂರು, ಮೈಸೂರು, ಚಾಮರಾಜನಗರದಲ್ಲಿ "ಟೆಟ್ರಾಪ್ಯಾಕ್" ಘಟಕ
ಇದೇ ವೇಳೆ ಹಾಲು ಕೆಡದಂತೆ ಬಹುದಿನಗಳವರೆಗೆ ಸಂಗ್ರಹಿಸಿಡಬಹುದಾದ ಟೆಟ್ರಾಪ್ಯಾಕ್ ಪ್ಯಾಕೆಟ್ ಗಳನ್ನು ಉತ್ಪಾದಿಸಲು ಬೆಂಗಳೂರು, ಮೈಸೂರು, ಚಾಮರಾಜನಗರಗಳಲ್ಲಿ ಘಟಕಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಪ್ರತಿ ಘಟಕದಲ್ಲಿ ತಲಾ 1 ಲಕ್ಷ ಲೀಟರ್ ಹಾಲು ಸಂಗ್ರಹಿಸಲು ಯೋಜಿಸಲಾಗಿದ್ದು, ಭವಿಷ್ಯದ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನೂ ಹೆಚ್ಚಿಗೆ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆದಿದೆ ಎಂದರು.
ರೇವಣ್ಣ ಆರೋಪದಲ್ಲಿ ಹುರುಳಿಲ್ಲ
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಯರಾಮ್ ಅವರು ನಿವೃತ್ತಿಗೆ ಮುನ್ನಾ ದಿನ ಸುಮಾರು 400 ಕೋಟಿ ರು.ಗಳ ಟೆಂಡರ್ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡುವ ಮೂಲಕ ಅಕ್ರಮ ಎಸಗಿದ್ದಾರೆಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
"ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಿರುವುದು ಆಡಳಿತ ಮಂಡಳಿಯ ನಿರ್ಧಾರ. ಅದನ್ನು ಜಾರಿಗೊಳಿಸುವುದಷ್ಟೇ ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯವಾಗಿರುತ್ತದೆ. ಆದರೂ, ರೇವಣ್ಣ ಅವರು ಅಕ್ರಮ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಮುಂದಿನ ಸಭೆಯಲ್ಲಿ ಪರಾಮರ್ಶೆ ಮಾಡಬೇಕು ಎಂದು ಕೆಎಂಎಫ್‌ಗೆ ಸೂಚಿಸಲಾಗಿದೆ" ಎಂದು ಮಹದೇವ ಪ್ರಸಾದ್ ಹೇಳಿದರು.
Advertisement