ನುಡಿನಮನಕ್ಕಿಂತ ನಡೆನಮನ ಮುಖ್ಯ: ಚಂಪಾ

ದುಷ್ಕರ್ಮಿಗಳ ಗುಂಡಿಗೆ ಹತ್ಯೆಯಾದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ `ನುಡಿನಮನ' ಸಲ್ಲಿಸುವುದಕ್ಕಿಂತ ಅವರು ಹಾಕಿಕೊಟ್ಟ ವಿಚಾರಗಳನ್ನು ಅನುಸರಿಸಿ `ನಡೆನಮನ' ಸಲ್ಲಿಸುವುದೇ ಮುಖ್ಯ ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಪ್ರತಿಪಾದಿಸಿದರು...
ಸಾಹಿತಿ ಚಂದ್ರ ಶೇಖರ ಪಾಟೀಲ (ಸಂಗ್ರಹ ಚಿತ್ರ)
ಸಾಹಿತಿ ಚಂದ್ರ ಶೇಖರ ಪಾಟೀಲ (ಸಂಗ್ರಹ ಚಿತ್ರ)

ಬೆಂಗಳೂರು: ದುಷ್ಕರ್ಮಿಗಳ ಗುಂಡಿಗೆ ಹತ್ಯೆಯಾದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ `ನುಡಿನಮನ' ಸಲ್ಲಿಸುವುದಕ್ಕಿಂತ ಅವರು ಹಾಕಿಕೊಟ್ಟ ವಿಚಾರಗಳನ್ನು ಅನುಸರಿಸಿ `ನಡೆನಮನ'  ಸಲ್ಲಿಸುವುದೇ ಮುಖ್ಯ ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಪ್ರತಿಪಾದಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಬುರ್ಗಿ ಅವರನ್ನು ಯಾರು ಕೊಂದರು, ಯಾತಕ್ಕಾಗಿ ಕೊಂದರು? ಎಂಬುದನ್ನು ಹುಡುಕುತ್ತಾ ಹೋದರೆ ಅಂತಹ ಕೊಲೆಗಡುಕ ಮನಸ್ಸುಗಳು  ನಾವೆ ಯಾಕಾಗಿರಬಾರದು? ಎಂಬ ಉತ್ತರ ಸಿಗುತ್ತದೆ. ಕಲಬುರ್ಗಿ ಶರಣರು ಹೇಳಿದ ಮಾತುಗಳನ್ನು ಉಲ್ಲೇಖ ಮಾಡಿ ಹೇಳುತ್ತಿದ್ದರು. ಆದರೆ ನಮ್ಮ ಕುಲಬಾಂಧವರು ಎಂದು ಕರೆಯುವ   ವೀರಶೈವರು ಸಮುದಾಯದವರಿದ್ದೀವಲ್ಲ ನಾವು ಶರಣರ ಮಾತುಗಳನ್ನು ಮರೆತಿದ್ದೇವೆ ಎಂದು ನುಡಿದರು.

ಶರಣರು ಹೇಳಿದ ಹಾಗೆ ವೀರಶೈವರು ದಲಿತರು, ಹಿಂದುಳಿದವರನ್ನು ಅಪ್ಪಿಕೊಂಡಿದ್ದರೆ ಸಮಾನತೆ ಇರುತ್ತಿತ್ತು. ರಾಜ್ಯದಲ್ಲಿ ಕೋಮುವಾದ ಬೆಳೆಯಲು ಒಂದು ರೀತಿಯಲ್ಲಿ ವೀರಶೈವರೇ  ಕಾರಣರಾಗಿದ್ದಾರೆ. ಶರಣ ಪರಂಪರೆಯಿಂದ ಬಂದ ನಮ್ಮ ಕುಲಬಾಂಧವರು ಇಂದು ಕೋಮುವಾದದೊಂದಿಗೆ ಗುರುತಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಿಜವಾದ ಶರಣರಿಗೆ  ಕೋಮುವಾದ ಬೇಕಿಲ್ಲ. ಬಸವ ತತ್ವ ವಿರೋಧಿ ಸುವವರೊಂದಿಗೆ ಸೇರಿಕೊಂಡಿರುವ ಇವರ ನಡೆಗೆ ಉತ್ತರ ಹುಡುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕುಲಬಾಂಧವ ಸಾವಿಗೀಡಾದ್ದಾನೆ ಎಂದು  ಶ್ರದ್ಧಾಂಜಲಿ ಸಭೆ ಏರ್ಪಡಿಸಿ ಆತ್ಮಶಾಂತಿ ಕೋರಿದರೆ ಫಲವೇನು? ಕಲಬುರ್ಗಿ ಆತ್ಮ ಎಂದೂ ಶಾಂತಿ ಬಯಸುವುದಿಲ್ಲ. ದೇವರಿಗೆ ಶಾಂತಿ ಇಲ್ಲ ಎಂದ ಮೇಲೆ ಕಲಬುರ್ಗಿ ಆತ್ಮಕ್ಕೆ ಶಾಂತಿ  ಕೊಡಲು ಹೇಗೆ ಸಾಧ್ಯ ಎಂದರು.

ಸಿಐಡಿ ತನಿಖೆ ಸರಿಯಾಗಿ ಆಗಲಿ
ಕಲಬುರ್ಗಿ ಅವರ ಹತ್ಯೆ ಘಟನೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತನಿಖೆಗೆ ಚುರುಕು ಮುಟ್ಟಿಸುವಂತೆ ಕೋರಲಾಗಿದೆ. ಅದು ಅಲ್ಲದೆ  ಸಾಹಿತಿಗಳಾದ ನಾವು ಕೂಡಲೇ ಮತ್ತೊಂದು ಸಭೆ ಕರೆದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಶೀಘ್ರ ತನಿಖೆ ನಡೆಸಿ ಸತ್ಯವನ್ನು ಹೊರ ಹಾಕುವಂತೆ ಒತ್ತಡ ಹೇರಬೇಕು. ಅಂತಹ   ನಿರ್ಣಯ ಈ ಸಭೆಯಿಂದ ರವಾನೆಯಾಗಲಿ ಎಂದರು.

ಮಾರ್ಗ ಪುಸ್ತಕ ಬರೆದಾಗ ವೀರಶೈವರು ಕುಡಗೋಲು, ಮಚ್ಚು ಹಿಡಿದು ಬಂದಾಗ, ಅನಿವಾರ್ಯವಾಗಿ ಕಲಬುರ್ಗಿಯವರು ತಮ್ಮ ಕುಟುಂಬದ ರಕ್ಷಣೆಗಾಗಿ ರಾಜಿಯಾದರು. ಆಗ ತನ್ನೊಳಗಿನ  ಚಿಂತಕ ಆತ್ಮಹತ್ಯೆ ಮಾಡಿಕೊಂಡ ಎಂಬ ಮಾತುಗಳನ್ನು ಸ್ವತಃ ಕಲಬುರ್ಗಿಯವರೇ ಹೇಳಿಕೊಂಡಿದ್ದು ನನಗೆ ಇನ್ನೂ ನೆನಪಿದೆ.
-ಪ್ರೊ..ಚಂದ್ರಶೇಖರ ಪಾಟೀಲ ಸಾಹಿತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com