ಬಾಬಾಬುಡನ್‍ಗಿರಿ ವಿವಾದ ಇತ್ಯರ್ಥಗೊಳಿಸಿ

ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿ ದರ್ಗಾದಲ್ಲಿ ಹೊಸ ಆಚರಣೆ ಜಾರಿಗೆ ತರುವ ಮೂಲಕ ಅದು ಕೇವಲ ಹಿಂದೂಗಳಿಗೆ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು...
ಕೋಮು ಸೌಹಾರ್ಧ ವೇದಿಕೆ ಸಮಿತಿ ಸದಸ್ಯೆ ಗೌರಿ ಲಂಕೇಶ್ (ಸಂಗ್ರಹ ಚಿತ್ರ)
ಕೋಮು ಸೌಹಾರ್ಧ ವೇದಿಕೆ ಸಮಿತಿ ಸದಸ್ಯೆ ಗೌರಿ ಲಂಕೇಶ್ (ಸಂಗ್ರಹ ಚಿತ್ರ)

ಬೆಂಗಳೂರು: ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿ ದರ್ಗಾದಲ್ಲಿ ಹೊಸ ಆಚರಣೆ ಜಾರಿಗೆ ತರುವ ಮೂಲಕ ಅದು ಕೇವಲ ಹಿಂದೂಗಳಿಗೆ ಮಾತ್ರ ಎಂಬಂತೆ  ಬಿಂಬಿಸಲಾಗುತ್ತಿದ್ದು, ಇದಕ್ಕೆ  ಅವಕಾಶ ಕಲ್ಪಿಸಬಾರದು. ಈ ವಿವಾದವನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಮು ಸೌಹಾರ್ಧ ವೇದಿಕೆ ಕೇಂದ್ರ ಸಮಿತಿ ಸದಸ್ಯೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್, ಬಾಬಾಬುಡನ್‍ಗಿರಿ ವಿವಾದಕ್ಕೆ ಸಂಬಂಧಿಸಿದ ಈಗ  ಎದ್ದಿರುವ ವಿವಾದವನ್ನು ರಾಜ್ಯ ಸರ್ಕಾರ ಬಗೆಹರಿಸ ಬೇಕು ಹಾಗೂ ಈ ಹಿಂದೆ ಇದ್ಧ ಆಚರಣೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ವಿವಾದ ಬಗಹರಿಸುವಂತೆ  ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಅದನ್ನು ವೇದಿಕೆ ಸ್ವಾಗತಿಸಿದೆ. ದರ್ಗಾ ಹಿಂದೂಗಳಿಗೆ ಸೇರಿದ್ದು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಇಲ್ಲಿ ಹಿಂದೂ  ಹಾಗೂ ಮುಸ್ಲಿಂ ಇಬ್ಬರೂ ಅಲ್ಲಿ ಎಲ್ಲ ರೀತಿಯ ಆಚರಣೆಗೆ ಅವಕಾಶ ಕಲ್ಪಿಸಬೇಕು. ಅದನ್ನು ಬಿಟ್ಟು, ಅದು ಕೇವಲ ಹಿಂದೂಗಳಿಗೆ ಸೇರಿದ್ದು ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದು  ಅಭಿಪ್ರಾಯಪಟ್ಟರು. ಸ್ಥಳೀಯ ಶಾಸಕ ಸಿ.ಟಿ.ರವಿ ಹಾಗೂ ಸಂಘ ಪರಿವಾರದ ಸದಸ್ಯರು ದರ್ಗಾ ವಿವಾದಕ್ಕೆ ಪ್ರಮುಖ ಕಾರಣ.

ಹಿಂದೂ ವೋಟ್ ಬ್ಯಾಂಕ್‍ಗಾಗಿ ಅವರು ಬಾಬಾಬುಡನ್ ಗಿರಿ ವಿವಾದವನ್ನು ಜೀವಂತವಾಗಿಟ್ಟಿದ್ದಾರೆ. ಕೋಮುವಾದಿಗಳು ಸುಪ್ರೀಂ ಕೋರ್ಟ್‍ನ ಅಂಶಗಳನ್ನು ಮರೆಮಾಚಲು  ಸಾರ್ವಜನಿಕವಾಗಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆದ್ಧರಿಂದ ರಾಜ್ಯ ಸರ್ಕಾರ ಕೂಡಲೇ ಈ ವಿವಾದ ಬಗೆಹರಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಜೀವಂತವಾಗಿಯೇ ಉಳಿಯಲಿದೆ  ಎಂದರು. 10 ವರ್ಷಗಳ ಹಿಂದೆ ಬಾಬಾಬುಡನ್ ಗಿರಿಯಲ್ಲಿ ಯಾವುದೇ ರೀತಿಯ ದತ್ತಪೀಠ, ರಥಯಾತ್ರೆ, ಶೋಭಾ ಯಾತ್ರೆಯೂ ನಡೆಯುತ್ತಿರಲಿಲ್ಲ. ಸಿ.ಟಿ.ರವಿ ಶಾಸಕರಾದ ನಂತರ  ಇವೆಲ್ಲಾ ಹುಟ್ಟಿಕೊಂಡಿವೆ ಎಂದು ಸಂಘಪರಿವಾರದ ವಿರುದ್ಧ ಗೌರಿ ಲಂಕೇ ಶ್ ಕಿಡಿಕಾರಿದರು. ಬೆಂಗಳೂರು ಜಿಲ್ಲಾದ್ಯಕ್ಷ ಅಮ್ಜದ್ ಪಾಷ, ಪ್ರಧಾನ ಕಾರ್ಯದರ್ಶಿ ರಾಬಿನ್ ಮತ್ತಿತರರು  ಇದ್ದರು.

ಕೋಮುಗಲಭೆ ಸೃಷ್ಟಿಸಲು ಸಂಚು
ಇದೇ ವೇಳೆ ಮಾತನಾಡಿದ ವೇದಿಕೆಯ ಪ್ರಧಾನ ಸಂಚಾಲಕ ಕೆ.ಎಲ್.ಅಶೋಕ್, ದರ್ಗಾದಲ್ಲಿ ಸಂಘ ಪರಿವಾರದವರು ಹಾಗೂ ಕೆಲವು ಕಟ್ಟಾ ಹಿಂದೂ ಮೂಲಭೂತವಾದಿಗಳು ಉದ್ದೇಶ  ಪೂರ್ವಕವಾಗಿ ವಿವಾದಿತ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತಿದ್ದಾರೆ. ಈ ಬಾರಿಯೂ ಅಂತಹ ಒಳಸಂಚು ನಡೆದಿದ್ದು, ಕೋಮುಗಲಭೆ ಸೃಷ್ಟಿಸಲು ಎಲ್ಲ ರೀತಿಯ ಸಂಚು ನಡೆದಿದೆ.  ಸಮಾರು ಹತ್ತು ವರ್ಷಗಳಿಂದ ಇಂತಹ ಸಂಚು ನಡೆಯುತ್ತಲೇ ಇದೆ. ಹಾಗಾಗಿ ಸರ್ಕಾರ ಕೂಡಲೇ ಸಂಘಪರಿವಾರದ ಇಂತಹ ಚಟುವಟಿಕೆಗಳಿಗೆ ತೆರೆ ಎಳೆಯಬೇಕು ಎಂದು  ಆಗ್ರಹಿಸಿದರು. ದರ್ಗಾ ವಿವಾದಕ್ಕೆ ಸಂಬಂಧಪಟ್ಟಂತೆ ಎಂಟು ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಇವೆಲ್ಲವು ಜಾತ್ಯತೀತ ನಿಲುವುಗಳಾಗಿವೆ. ಹಾಗಾಗಿ ಸರ್ಕಾರ ಅದನ್ನು ಮತ್ತೆ  ಪರಿಶೀಲಿಸಿ ವಿವಾದಕ್ಕೆ ತೆರೆ ಎಳೆಯಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com