ರುದ್ರ ಪಾಟೀಲನ ಬೆನ್ನುಹತ್ತಿದ ಪೊಲೀಸರು

ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಸೇರಿದಂತೆ ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದ...
ಧಾರವಾಡದಲ್ಲಿರುವ ಡಾ.ಎಂ.ಎಂ.ಕಲಬುರ್ಗಿಯವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಕಲಬುರ್ಗಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಧಾರವಾಡದಲ್ಲಿರುವ ಡಾ.ಎಂ.ಎಂ.ಕಲಬುರ್ಗಿಯವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಕಲಬುರ್ಗಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಧಾರವಾಡ / ಗದಗ:ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಸೇರಿದಂತೆ ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಪೊಲೀಸರು ಸಾಂಗ್ಲಿಯ ರುದ್ರ ಪಾಟೀಲನ ಬೆನ್ನು ಬಿದ್ದಿದ್ದಾರೆ.

ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ವಿಶೇಷ ಪೊಲೀಸ್ ತನಿಖಾ ತಂಡ ಸಾಂಗ್ಲಿಯಲ್ಲಿ ಬಂಧಿಸಿರುವ ಸಮೀರ ಗಾಯಕವಾಡನನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಆತ ಈ ಕೊಲೆ ಹಿಂದೆ ರುದ್ರ ಪಾಟೀಲನ ಕೈವಾಡ ಇರುವ ಬಗ್ಗೆ ಬಾಯಿ ಬಿಟ್ಟಿದ್ದನೆಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಮಹಾರಾಷ್ಟ್ರದ ವಿಶೇಷ ತನಿಖಾ ತಂಡ ತನ್ನ ರಾಜ್ಯದ ಇಬ್ಬರು ವಿಚಾರವಾದಿಗಳ ಹತ್ಯೆ ಪ್ರಕರಣ ಬಯಲು ಮಾಡಲು ಇವನನ್ನು ತಡಕಾಡುತ್ತಿದ್ದರೆ, ರಾಜ್ಯದ ಸಿಐಡಿ ಡಾ. ಕಲಬುರ್ಗಿ ಅವರ ಹತ್ಯೆಯಲ್ಲೂ ಈತನ ಪಾತ್ರ ಇರಬಹುದೆಂಬ ಶಂಕೆಯಲ್ಲಿ ಬೆನ್ನು ಬಿದ್ದಿದೆ.

ಯಾರು  ರುದ್ರ ಪಾಟೀಲ?: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಪ್ರಮುಖ ಆರೋಪಿಯಾಗಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ಕ್ಕೆ ಬೇಕಾಗಿರುವ ರುದ್ರ ಪಾಟೀಲ `ವಾಂಟೆಡ್' ಎಂಬುದನ್ನು ಎನ್‍ಐಎ ವೆಬ್‍ಸೈಟ್‍ನಲ್ಲಿ ಕೆಲವು ಮಾಹಿತಿಗಳೊಂದಿಗೆ ಪ್ರಕಟಿಸಲಾಗಿದೆ. ಸಾಂಗ್ಲಿಯ ಗೋವನಬಾಗ್ ಜೋಶಿ ಗಲ್ಲಿ ದತ್ತಕೃಪಾ ಅಪಾರ್ಟ್ಮೆಂಟ್‍ನಲ್ಲಿ ಈತ ವಾಸವಾಗಿದ್ದು, ಮೊಬೈಲ್ ಶಾಪ್ ಇಟ್ಟುಕೊಂಡಿದ್ದ ಎಂದು ಎನ್‍ಐಎ ತಿಳಿಸಿದೆ. ಆದರೆ,ಅಕ್ರಮ ಶಸಾಸ್ತ್ರ ಪ್ರಕರಣದ ಆರೋಪ ಬಂದ ಕೂಡಲೇ ಈತ ನಾಪತ್ತೆಯಾಗಿದ್ದಾನೆ. ಮಹಾರಾಷ್ಟ್ರದ ಎಸ್‍ಐಟಿ ಹಾಗೂ ಕರ್ನಾಟಕದ ಸಿಐಡಿ ಈಗ ಈತನ ಹುಡುಕಾಟದಲ್ಲಿದ್ದು, ಈತನ ಬಂಧನವಾದರೆ ಮೂರು ಹತ್ಯೆಗಳ ತನಿಖೆಯಲ್ಲಿ ಮಹತ್ವದ ತಿರುವು ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾಜಿ ಪ್ರಧಾನಿ ಭೇಟಿ: ಈ ಮಧ್ಯೆ ಶನಿವಾರ ಧಾರವಾಡದ ಕಲ್ಯಾಣನಗರದ ಡಾ.ಎಂ.ಎಂ. ಕಲಬುರ್ಗಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,ಕಲಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.ಗಾಂಧೀಜಿ ಬಳಿಕ ಇದೇ ಘೋರ ಹತ್ಯೆ ಎಂದು ಹೇಳಿ ಭಾವುಕರಾದ ದೇವೇಗೌಡರು, ಮುಖ್ಯಮಂತ್ರಿಗಳು ಕಲಬುರ್ಗಿ ಹಂತಕನ ಸುಳಿವು ನೀಡಿದರೆ  5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿ
ದ್ದಾರೆ. 20 ದಿನಗಳ ತನಿಖೆಯಲ್ಲಿ ಹೇಳಿಕೊಳ್ಳುವ ಯಾವುದೇ ಸುಳಿವು ಸಿಕ್ಕಿಲ್ಲ. ನಮ್ಮ ಪೊಲೀಸರಿಗೆ ಕಲಬುರ್ಗಿ ಹಂತಕರನ್ನು ಹಿಡಿಯುವುದು ಚಿದಂಬರ ರಹಸ್ಯವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿಯೇ ಧಾರವಾಡ ಶಾಂತಿಧಾಮ. ಇಲ್ಲೇ ಸೂಕ್ಷ್ಮ ಮನಸ್ಸಿನ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.ವಾಟಾಳ್ ನಾಗರಾಜ ಹಾಗೂ ಡಾ. ರಾಜಕುಮಾರ್ ಅಭಿಮಾನಿ ಸಂಘದ ಸಾ.ರಾ. ಗೋವಿಂದ ಅವರೂ ಡಾ.ಕಲಬುರ್ಗಿ ನಿವಾಸಕ್ಕೆ ಭೇಟಿ ನೀಡಿದ್ದರು.

ಕಣವಿ, ಗಿರಡ್ಡಿ ನಿವಾಸಕ್ಕೆ ಭದ್ರತೆ
ಡಾ. ಎಂ.ಎಂ. ಕಲಬುರ್ಗಿ ಹತ್ಯೆಯ ವಿಷಯದಲ್ಲಿ ಸಾಹಿತಿಗಳು ಶ್ರೀರಾಮಸೇನೆ ಹೆಸರನ್ನು ಅನಾವಶ್ಯಕವಾಗಿ ತರುತ್ತಿದ್ದು ಅವರು ಕ್ಷಮೆಯಾಚಿಸಬೇಕೆಂದು ರಾಯಚೂರಿನಲ್ಲಿ ಶ್ರೀರಾಮ ಸೇನೆ ಪದಾಧಿಕಾರಿಗಳು ಶನಿವಾರ ಪ್ರತಿಭಟಿಸಿದ ಕಾರಣ ಇಲ್ಲಿನ ನಾಡೋಜ ಚೆನ್ನವೀರ ಕಣವಿ ಹಾಗೂ ಡಾ. ಗಿರಡ್ಡಿ ಗೋವಿಂದರಾಜ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.ಶ್ರೀರಾಮಸೇನೆ ಮುಖಂಡರು ರಾಯಚೂರಿನಲ್ಲಿ ನೀಡಿದ ಹೇಳಿಕೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಡಾ. ಚೆನ್ನವೀರ ಕಣವಿ ಹಾಗೂ ಡಾ.ಗಿರಡ್ಡಿ ಗೋವಿಂದರಾಜ ಅವರ ಮನೆಗೆ ತಲಾ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com