ರಾಜಧಾನಿಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ

ರಿಯಲ್ ಉದ್ಯಮದ ಕುಸಿತದ ನಡುವೆಯೂ ರಾಜ್ಯ ಸರ್ಕಾರ ರಾಜ್ಯ ರಾಜ ಧಾನಿ ಬೆಂಗಳೂರಿನಲ್ಲಿ ಮಾರ್ಗಸೂಚಿ ದರ ಪರಿಷ್ಕರಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಿಯಲ್ ಉದ್ಯಮದ ಕುಸಿತದ ನಡುವೆಯೂ ರಾಜ್ಯ ಸರ್ಕಾರ ರಾಜ್ಯ ರಾಜ ಧಾನಿ ಬೆಂಗಳೂರಿನಲ್ಲಿ ಮಾರ್ಗಸೂಚಿ ದರ ಪರಿಷ್ಕರಿಸಲು ಮುಂದಾಗಿದೆ. ವಾಸದ ಆಸ್ತಿಗಳಿಗೆ ಶೇ.10 ಮತ್ತು ವಾಣಿಜ್ಯ ಉದ್ದೇಶದ ಆಸ್ತಿಗಳಿಗೆ ಶೇ.40ರಷ್ಟು ದರ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ.

ಈ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಗ್ರಹಿಸುವ ಮುಂದಾಗಿರುವ ಸರ್ಕಾರ, ಮಧ್ಯಮ ವರ್ಗದ ಮೇಲೆ ಭಾರೀ ಪ್ರಹಾರ ಮಾಡಲು ತೀರ್ಮಾನಿಸಿದೆ. ಸರ್ಕಾರ, ನಗರ ಜಿಲ್ಲಾ ವ್ಯಾಪ್ತಿಯ ಸ್ಥಿರಾಸ್ಥಿಗಳ ಮಾರ್ಗಸೂಚಿ ದರದ ಕರಡು ಪ್ರಕಟಿಸಿದ್ದು, ಇದಕ್ಕೆ 15ದಿನಗಳ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ.

ಅದರಂತೆ ಆಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ನಿಗದಿ ಮಾಡಿದೆ. ಆಸ್ತಿಗಳು ಪರಭಾರೆಯಾ ಗುತ್ತಿರುವ ದರಗಳನ್ನು ಆಧರಿಸಿ ಮಾರ್ಗ ಸೂಚಿ ದರ ಪರಿಷ್ಕರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಇದು ನಿಜವೇ ಆಗಿದ್ದರೆ ದರ ಪರಿಷ್ಕರಣೆ ಶೇ.3ರಷ್ಟಿರಬೇಕಿತ್ತು. ಆದರೆ ಸರ್ಕಾರ ಏಕಾಏಕಿ ಶೇ.10ರಷ್ಟು ದರ ಹೆಚ್ಚಳ ಮಾಡಿದೆ. ಅದರಲ್ಲೂ ಕೈಗಾರಿಕೆ ಉತ್ತೇಜನಕ್ಕೆ ನೀಡುತ್ತಿದ್ದ ಶೇ.25ರಷ್ಟು ದರ ರಿಯಾಯಿತಿ ಸೌಲಭ್ಯ ರದ್ದುಗೊಳಿಸಲಾಗಿದೆ.

ಆದರೆ ಎಕರೆಗಟ್ಟಲೇ ಜಮೀನು ಖರೀದಿಸುವ ಶ್ರೀಮಂತರಿಗೆ ಕಡಿಮೆ ಪ್ರಮಾಣದ ದರ ಏರಿಕೆ ಮಾಡಿ ಅನುಕೂಲ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರೀಗೇಡ್ ರಸ್ತೆ, ರಿಚ್‍ಮಂಡ್ ರಸ್ತೆಯ ಆಸ್ತಿಗಳ ಬೆಲೆ ಚಿನ್ನಕ್ಕಿಂತ ದುಬಾರಿ ಆಗಲಿವೆ. ನಗರ ಕೇಂದ್ರ ಭಾಗದಲ್ಲಿ ಆಸ್ತಿ ಖರೀದಿಸುವ ಕನಸು ಕಾಣುವುದೂ ಕಷ್ಟವಾಗಲಿದೆ.

ನಿಯಮ ಬಾಹಿರ ಕ್ರಮ: ವಿಚಿತ್ರವೆಂದರೆ, ನೋಂದಣಿ ಮತ್ತು ಮುದ್ರಾಂಕ ಕಾಯ್ಧೆ ಪ್ರಕಾರ ಮಾರ್ಗಸೂಚಿ ದರ ಏರಿಕೆ ವರ್ಷಕ್ಕೊಮ್ಮೆ ಮಾಡಬೇಕು. ಆದರೆ, ವರ್ಷಕ್ಕೂ ಮುನ್ನ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ಹೋಗಿ ತೊಂದರೆ ತಂದುಕೊಳ್ಳಲು ಮುಂದಾಗಿದೆ. ಅಂದರೆ 2014 ರಿಂದ ಜಾರಿಗೆ ಬರುವಂತೆ ಈ ಹಿಂದೆ ದರ ಪರಿಷ್ಕರಣೆ ಮಾಡಲಾಗಿತ್ತು.

ಆದರೆ ಸರ್ಕಾರ ಕೇಂದ್ರ ಮೌಲ್ಯ ಮಾಪನ ಸಮಿತಿ ರಚಿಸಿ, ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಮಾಡಿ ಮಾರ್ಗಸೂಚಿಯ ಸರಾಸರಿನಿಗದಿ ಮಾಡಿದೆ.ಶೇ.10ರಷ್ಟು ಏರಿಕೆ ಮಾಡಿದೆ. ಆದರೆ ಇದರಿಂದ ಜನರು ಆಸ್ತಿ ಖರೀದಿಸುವ ಸಾಮರ್ಥ್ಯ ಕಡಿಮೆಯಾಗಿ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ಸಂಗ್ರಹ ಪ್ರಮಾಣವೂ ಕುಸಿಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಿಯಲ್ ಎಸ್ಟೇಟ್ ವಹಿವಾಟು ಇನ್ನಷ್ಟು ಕುಸಿಯಲಿದೆ. 

ಹೀಗೊಂದು ಅವೈಜ್ಞಾನಿಕ ಕ್ರಮ: ಕಟ್ಟಡ ಮತ್ತು ಅಪಾರ್ಟ್‍ಮೆಂಟ್‍ಗಳಿಗೆ ದರ ನಿಗದಿ ಮಾಡುವಾಗ ಪರಿವರ್ತನೆಯಾಗಿರುವ ಮತ್ತು ಬಿಡಿಎದಂಥ ಸಂಸ್ಥೆಯಿಂದ ಅನುಮೋದನೆ ಪಡೆದ ಎಂದು ವಿಂಗಡಿಸಲಾಗುತ್ತದೆ. ಆದರೆ ಈ ಬಾರಿ ದರ ನಿಗದಿಯಲ್ಲಿ ಪರಿವರ್ತನೆಯಾಗಿದ ಕೃಷಿ ಜಮೀನಿನ ಅಪಾರ್ಟ್‍ಮೆಂಟ್ ಮತ್ತು ಬಿಡಿಎ ಅನುಮೋದಿತ ಅಪಾರ್ಟ್‍ಮೆಂಟ್ ಎರಡನ್ನೂ ಒಂದೇ ಎಂದು ಪರಿಗಣಿಸಲಾಗಿದೆ. ಇವೆರಡಕ್ಕೂ ಒಂದೇ ರೀತಿಯ ದರ ನಿಗದಿ ಮಾಡಿದ್ದು, ಇದರಿಂದ ಸಹಜವಾಗಿಯೇ ಬಿಡಿಎ ಅನುಮೋದಿತ ಅಪಾರ್ಟ್‍ಮೆಂಟ್ ಮತ್ತು ಕಟ್ಟಡಗಳ ಖರೀದಿ ಕಡಿಮೆಯಾಗಲಿದೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ.
 
ದರ ನಿಗದಿ ಹೇಗೆಲ್ಲಾ ಇದೆ ?
5 ಗುಂಟೆ ಜಮೀನಿಗೆ ಏರಿಕೆ ಇಲ್ಲ.
 10 ಗುಂಟೆ ಜಮೀನಿಗೆ ಪ್ರದೇಶದ ನಿವೇಶನ ದರಕ್ಕಿಂತ ಶೇ.50 ಹೆಚ್ಚು.
 ಕೈಗಾರಿಕೆ ಉಪಯೋಗಕ್ಕಾದರೆ ಶೇ.50ಕ್ಕೂ ಹೆಚ್ಚು.
 ವಾಸದ ಉದ್ದೇಶಕ್ಕೆ ಪರಿವರ್ತನೆ ಯಾಗಿದ್ದರೆ ಶೇ.60ರಷ್ಟು ಅಧಿಕ
 ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀನಿಗೆ ಶೇ.75ರಷ್ಟು .
 ರಾಷ್ಟ್ರೀಯ ಹೆದ್ದಾರಿ ಮತ್ತು ವರ್ತುಲ ರಸ್ತೆಗಳ ಪಕ್ಕದ ಆಸ್ತಿ ಯಾದರೆ ಆಯಾ ಪ್ರದೇಶದಲ್ಲಿರುವ ನಿವೇಶನ ದರಕ್ಕಿಂತ ಶೇ.50 ಹೆಚ್ಚು,
 ಮೂಲೆ ನಿವೇಶನಗಳಿಗೆ ನಿವೇಶನ ದರಕ್ಕಿಂತ ಶೇ.10 ಹೆಚ್ಚು.
 ವಾಣಿಜ್ಯ, ವಸತಿಯೇತರ ಪ್ಲಾಟ್ ಸರ್ವೀಸ್ ಅಪಾರ್ಟ್ ಮೆಂಟ್ ಗಳಿಗೆ ಅಪಾರ್ಟ್‍ಮೆಂಟ್ ಪ್ಲಾಟ್ ಗಳ ದರ ಶೇ.30ರಷ್ಟು ಹೆಚ್ಚು.
6ನೇ ಅಂತಿಸ್ತಿಗೂ ಮೇಲ್ಪಟ್ಟ ಕಟ್ಟಡಗಳಿಗೆ ಶೇ.50 ವರೆಗೆ ಶುಲ್ಕ.
ಪರಿಣಾಮ ಏನು?
ಆಸ್ತಿ ಮೌಲ್ಯ ಶೇ. 40ರಷ್ಟು ಹೆಚ್ಚಾಗುತ್ತದೆ.
ಆಸ್ತಿ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ.
 ವೇತನ ಕಡಿಮೆ ಇರುವವರಿಗೆ ಬ್ಯಾಂಕ್ ಸಾಲ ಸಿಗೊಲ್ಲ.
 ನೋಂದಣಿ ದುಬಾರಿಯಾಗಿ ಶುಲ್ಕ ಸಂಗ್ರಹ ಕುಸಿಯುತ್ತದೆ.
 ಮಾರಾಟ, ಖರೀದಿ ಕಡಿಮೆ, ರಿಯಲ್ ಎಸ್ಟೇಟ್ ಕುಸಿತ.
ಅಪಾರ್ಟ್‍ಮೆಂಟ್ ಖರೀದಿ, ಮಾರಾಟ ಪಾತಾಳಕ್ಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com