
ಬೆಳಗಾವಿ: ಏನೇ ಮಾಡಿದರೂ ಜೀರ್ಣಿಸಿ ಕೊಳ್ಳಬಹುದು ಎನ್ನುವವರಿಗೆ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಒಂದು ಪಾಠವಾಗಲಿದೆ ಎನ್ನುವ ಮೂಲಕ ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ಶನಿವಾರ ನಗರದ ಭರತೇಶ ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮ ದವರ ಪ್ರಶ್ನೆಗಳಿಗೆ ಉತ್ತರಿಸುತ್ತ, `ಏನೇ ಮಾಡಿದರೂ ಜೀರ್ಣಿಸಿಕೊಳ್ಳಬಹುದು ಎನ್ನುವ ದಿಕ್ಕಿನಲ್ಲಿ ಮನಸ್ಸು ಹರಿಯಬಿಟ್ಟವರಿಗೆ ಇದೊಂದು ದೊಡ್ಡ ಎಚ್ಚರಿಕೆ. ಈ ತರಹದ ಪ್ರವೃತ್ತಿ ಇರುವವರಿಗೆ ಒಳ್ಳೆಯ ಪಾಠ. ಇನ್ನು ಏನಾದರೂ ಮಾಡುವ ಮೊದಲು ಹೆದರುತ್ತಾರೆ. ಜನ ನಮ್ಮನ್ನು ಅಷ್ಟು ಸುಲಭವಾಗಿ ಬಿಡೋದಿಲ್ಲ, ಕ್ಷಮಿಸೋದಿಲ್ಲ. ಏನೇ ಮಾಡಿದರೂ ಜೀರ್ಣಿಸಿಕೊಳ್ಳಬಹುದು ಎಂದು ಭಾವಿಸಿಕೊಂಡವರಿಗೆ, ಅದು ಸಾಧ್ಯವಿಲ್ಲ ಎಂಬ ಎಚ್ಚರ ಈ ಘಟನೆಯ ಹಿಂದಿದೆ' ಎಂದು ಅವರು ಹೇಳಿದ್ದಾರೆ.
ಇದೇವೇಳೆ, ಕಲಬುರ್ಗಿ ಅವರ ಹತ್ಯೆ ವೈಚಾರಿಕ ಕಾರಣಗಳಿಂದ ಆಗಿದೆ ಎಂಬ ಬಗ್ಗೆಯೂ ಏನೂ ಹೇಳಲಾಗದು ಎಂದು ದ್ವಂದ್ವದ ಹೇಳಿಕೆಯನ್ನೂ ಹಂ.ಪ.ನಾ ನೀಡಿದರು. ``ಕಲಬುರ್ಗಿ ಅವರ ಹಂತಕರ ಕುರಿತಂತೆ ಏನೂ ಗೊತ್ತಿಲ್ಲದೇ, ನಾವೇ ನ್ಯಾಯಾಧೀಶರಂತೆ ಇಂತಹವರೇ ಈ ಕೃತ್ಯ ಮಾಡಿದ್ದಾರೆ ಎಂದು ತೀರ್ಪು ನೀಡುವುದು ಸರಿಯಲ್ಲ. ಸರ್ಕಾರ, ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ. ಆದಷ್ಟು ಬೇಗ ಹಂತಕರ ಪತ್ತೆ ಹಚ್ಚಿ ಬಂಧಿಸಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ. ಹಂತಕರ ಬಂಧನಕ್ಕೆ ಗಡುವು ವಿಧಿಸುವುದು ಸಹ ಸರಿಯಲ್ಲ'' ಎಂದು ಅವರು ಹೇಳಿದರು.
``ಕಲಬುರ್ಗಿ ಅವರ ಹತ್ಯೆಯಂತಹ ಹೀನ ಘಟನೆಯನ್ನು ಎಲ್ಲರೂ ಖಂಡಿಸಲೇ ಬೇಕು. ತಪ್ಪಿ ತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯೂ ನೀಡಬೇಕು. ಆದರೆ ತನಿಖೆ ನಡೆಯುವ ಮೊದಲೇ ಸಂದೇಹದಿಂದ ಇಂತಹವರೇ ಕೊಲೆ ಮಾಡಿದ್ದಾರೆ ಎಂಬ ನಿರ್ಧಾರಕ್ಕೆ ಬರುವುದು ಸರಿ ಯಲ್ಲ. ಸರ್ಕಾರ, ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ. ಹಂತಕರ ಬಗ್ಗೆ ಸರಿಯಾಗಿ ಮಾಹಿತಿ ಇರದೇ ಯಾರ್ಯಾರದ್ದೋ ಮೇಲೆ ಆಪಾದನೆ ಮಾಡಲು ನಾನು ಇಷ್ಟಪಡುವುದಿಲ್ಲ'' ಎಂದರು.
ಭಗವಾನ್ ವಿರುದ್ಧ ಮತ್ತೆರಡು ದೂರು
ಮಂಗಳೂರು: ಪ್ರೊ..ಕೆ.ಎಸ್.ಭಗವಾನ್ ವಿರುದ್ಧ ಧರ್ಮ ನಿಂದನೆ ಆರೋಪದ ಮೇಲೆ ಸೋಮವಾರಪೇಟೆ ಹಾಗೂ ಪುತ್ತೂರುಗಳಲ್ಲಿ ಇನ್ನೆರಡು ಹೊಸ ದೂರುಗಳು ದಾಖಲಾಗಿವೆ. ಸೋಮವಾರ ಪೇಟೆಯಲ್ಲಿ ಬಸವನಕೊಪ್ಪ ಗ್ರಾಮದ ದಯಾನಂದ್ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ಭಗವಾನ್ ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆ ಆಧರಿಸಿ ದೂರು ನೀಡಿರುವುದರಿಂದ ಪ್ರಕರಣವನ್ನು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಅನಿಲ್ ತೆಂಕಿಲ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿಗೆ ಸಿಐಡಿ ತಂಡ
ಧಾರವಾಡ: ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರ ಸಾವಿನ ತನಿಖೆ ಕೈಗೊಂಡಿದ್ದ ಸಿಐಟಿ ತಂಡ ಶನಿವಾರ ಬೆಂಗಳೂರಿಗೆ ಧಾವಿಸಿದ್ದು, ಸೋಮವಾರ ನಗರಕ್ಕೆ ಆಗಮಿಸಿ, ತನಿಖೆ ಚುರುಕುಗೊಳಿಸಲಿದೆ.
Advertisement