ಕದ್ದು ಸೆಲ್ಪಿ ತೆಗೆದಿದ್ದೇ ಕಳ್ಳತನ ಮಾಡಿದ್ದವಳು ಸಿಕ್ಕಿಬೀಳಲು ಕಾರಣವಾಯ್ತು

ಸ್ಮಾರ್ಟ್ ಫೋನ್‍ಗಳಿಂದ ಎಲ್ಲೆಡೆ ಜನಪ್ರಿಯವಾಗಿರುವ `ಸೆಲ್ಫಿ' ಗೀಳಿನಿಂದ ಸಂಭವಿಸುತ್ತಿರುವ ಅನಾಹುತಗಳು ಪ್ರಪಂಚದಾದ್ಯಂತ ವರದಿಯಾಗುತ್ತಿವೆ. ಕಳ್ಳತನ ಆರೋಪಿ ತೆಗೆದುಕೊಂಡ ಸೆಲ್ಫಿ ಪೊಲೀಸರ ಕೆಲಸ ಸುಲಭ ಮಾಡಿಕೊಟ್ಟಿದೆ.
ಕಳ್ಳತನ ಮಾಡಿ ಸಿಕ್ಕಿಬಿದ್ದ ನಂದಿನಿ
ಕಳ್ಳತನ ಮಾಡಿ ಸಿಕ್ಕಿಬಿದ್ದ ನಂದಿನಿ

ಬೆಂಗಳೂರು: ಸ್ಮಾರ್ಟ್ ಫೋನ್‍ಗಳಿಂದ ಎಲ್ಲೆಡೆ ಜನಪ್ರಿಯವಾಗಿರುವ `ಸೆಲ್ಫಿ' ಗೀಳಿನಿಂದ ಸಂಭವಿಸುತ್ತಿರುವ ಅನಾಹುತಗಳು ಪ್ರಪಂಚದಾದ್ಯಂತ ವರದಿಯಾಗುತ್ತಿವೆ. ಆದರೆ, ಈ ಪ್ರಕರಣ ಸ್ವಲ್ಪ ವಿಭಿನ್ನ. ಏಕೆಂದರೆ, ಇಲ್ಲಿ ಕಳ್ಳತನ ಆರೋಪಿ ತೆಗೆದುಕೊಂಡ ಸೆಲ್ಫಿ ಪೊಲೀಸರ ಕೆಲಸ ಸುಲಭ ಮಾಡಿಕೊಟ್ಟಿದೆ.

ನಗರದ ಮನೆಕೆಲಸದಾಕೆಯೊಬ್ಬಳು ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಈ ಬಗ್ಗೆ ದೂರು ದಾಖಲಾಗಿ, ಪೊಲೀ ಸರು ತನಿಖೆಯನ್ನೂ ಕೈಗೆತ್ತಿಕೊಂಡಿದ್ದರು. ಎಲ್ಲಿಯೂ ಸುಳಿವು ಸಿಗದೆ ಪೊಲೀಸರು ಕೊನೆಗೆ ಅನುಮಾನದ ಮೇಲೆ ಮನೆಗೆಲಸದಾಕೆಯನ್ನು ವಿಚಾರಣೆ ನಡೆಸುತ್ತಿದ್ದಾಗ ಆಕೆಯ ಮೊಬೈಲ್‍ನಲ್ಲಿ ಪತ್ತೆಯಾದ ಒಂದು ಸೆಲ್ಫಿ ಚಿತ್ರ, ಆಕೆ ಕಳ್ಳಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿತ್ತು. ಆಗಿದ್ದೇನೆಂದರೆ, ಆಕೆ ಆಭರಣ ಕದ್ದು, ಅದನ್ನು ಧರಿಸಿ ಸೆಲ್ಫಿ ತೆಗೆದುಕೊಂಡಿದ್ದಳು. ಈ ಚಿತ್ರ ಪೊಲೀಸರಿಗೆ ಸಿಕ್ಕಿತ್ತು.

ಪ್ರಕರಣದ ವಿವರ: ವರ್ತೂರು ಸಮೀಪದ ತೂಬರಹಳ್ಳಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿ ಮುಕುಂದ ದಂಪತಿ ನೆಲೆಸಿದ್ದಾರೆ. ಇವರ ಮನೆಯಲ್ಲಿ ಕಳೆದೊಂದು ವರ್ಷದಿಂದ ನಂದಿನಿ ಎಂಬುವವರು ಕೆಲಸಕ್ಕಿದ್ದರು. ದಂಪತಿ ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೋದರೆ ಬರುತ್ತಿದ್ದದ್ದೇ ರಾತ್ರಿ 7ಕ್ಕೆ. ದಂಪತಿ 400 ಗ್ರಾಂನಷ್ಟು ಒಡವೆ ಹೊಂದಿದ್ದರು. ಮನೆಯಲ್ಲಿದ್ದ ಆಭರಣದ ವಿಚಾರ ತಿಳಿದಿದ್ದ ನಂದಿನಿ, ದಂಪತಿ ಕೆಲಸಕ್ಕೆ ತೆರಳಿದ ನಂತರ, ಮನೆಯಲ್ಲೇ ಇದ್ದ ಕೀ ಬಳಸಿ ಒಡವೆ ಕದಿಯುತ್ತಿದ್ದಳು. ಒಂದೇ ಬಾರಿಗೆ ಎಲ್ಲ ಆಭರಣ ಕದ್ದರೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ಜನವರಿಯಿಂದ ಒಂದೊಂದೇ ಒಡವೆ ಕದಿಯುತ್ತಿದ್ದಳು.ಪ್ರತಿ ಶನಿವಾರ ಮತ್ತು ಭಾನುವಾರ ಹುಟ್ಟೂರಿಗೆ ತೆರಳುವಾಗ ಒಡವೆ ತೆಗೆದುಕೊಂಡು ಹೋಗುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಣೇಶ ಹಬ್ಬದಂದು ಕಳ್ಳತನ ಬಯಲು: ಗಣೇಶ ಚತುರ್ಥಿ ದಿನ ಆಭರಣ ಧರಿಸಲು ಮುಕುಂದ ಅವರ ಪತ್ನಿ ಬೀರು ತೆಗೆದಾಗ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮನೆ ಕೆಲಸ ಮಾಡುತ್ತಿದ್ದ ನಂದಿನಿಯನ್ನು ವಿಚಾರಿಸಿದಾಗ ತನಗೇನು ಗೊತ್ತಿಲ್ಲ ಎಂದಿದ್ದಳು. ಕೊನೆಗೆ ದಂಪತಿ ವರ್ತೂರು ಠಾಣೆಯಲ್ಲಿ ದೂರಿದ್ದರು. ಆದರೆ ಆಕೆಯನ್ನು ಕೆಲಸದಿಂದ ತೆಗೆದಿರಲಿಲ್ಲ. ಪೊಲೀಸರು ತನಿಖೆ ಆರಂಭಿಸಿದಾಗ ದಂಪತಿ ಕೆಲಸಕ್ಕೆ ಹೋದ ಬಳಿಕ ಮನೆಕೆಲಸದಾಕೆ ನಂದಿನಿ ಮಾತ್ರ ಮನೆಯಲ್ಲಿರುತ್ತಿದ್ದಳು ಎಂಬ ವಿಚಾರ ಗೊತ್ತಾಗಿದೆ. ಉಳಿದಂತೆ ಗುರುತಿನ
ಚೀಟಿ ಇದ್ದವರಿಗೆ ಮಾತ್ರ ಅಪಾರ್ಟ್‍ಮೆಂಟ್ ಪ್ರವೇಶಕ್ಕೆ ಅವಕಾಶ. ಹೀಗಾಗಿ, ಬೇರೆಯವರು ಫ್ಲ್ಯಾಟ್ ಗೆ ಬರಲು ಅವಕಾಶವಿರಲಿಲ್ಲ. ಹೀಗಾಗಿ ಆರಂಭದಿಂದಲೂ ಕಳ್ಳತನದ ಹಿಂದೆ ನಂದಿನಿ ಕೈವಾಡ ಇರುವ ಬಗ್ಗೆ ಅನುಮಾನ ಹೊಂದಿದ್ದ ಪೊಲೀಸರು ಆಕೆಯ ಮೇಲೆ ನಿಗಾ
ಇರಿಸಿದ್ದರು.
ಕಳ್ಳಿಯ ಸೆರೆ ಹಿಡಿದ ಸೆಲ್ಫಿ: ನಾಲ್ಕೈದು ದಿನ ನಂದಿನಿ ಚಲನವಲನಗಳ ಮೇಲೆ ನಿಗಾ ಇರಿಸಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಅನುಮಾನದ ಮೇಲೆ ವಿಚಾರಣೆ ನಡೆಸುವ ವೇಳೆ ಪೊಲೀಸರು ಆಕೆಯ ಮೊಬೈಲ್ ಪರಿಶೀಲಿಸಿದ್ದರು. ಆಗ, ಆಭರಣ ಧರಿಸಿ ತೆಗೆದುಕೊಂಡಿದ್ದ ಸೆಲ್ಫಿ ಫೋಟೋಗಳು ಸಿಕ್ಕಿವೆ. ದೂರುದಾರರಿಗೆ ಆ ಫೋಟೋಗಳನ್ನು ತೋರಿಸಿದಾಗ ಆಭರಣಗಳು ತಮಗೆ ಸೇರಿದ್ದು ಎಂದು ಖಚಿತಪಡಿಸಿದ್ದಾರೆ. ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿತೆ ತಪ್ಪೊಪ್ಪಿಕೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದರು.  ರಾಮನಗರ ಜಿಲ್ಲೆ ಅಕ್ಕೂರು ಗ್ರಾಮದ ನಂದಿನಿ ಅಲಿಯಾಸ್ ರಂಜಿತಾ (22) ಆರೋಪಿ. ಈಕೆಯಿಂದ 6 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಮತ್ತು 300 ಗ್ರಾಂ ಬೆಳ್ಳಿ ವಸ್ತುಗಳ ವಶಕ್ಕೆ ಪಡೆದು 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com