ಕೆಲಸ ಕಳೆದುಕೊಳ್ಳಲಿದ್ದಾರೆ ಕಿಮ್ಸ್ ಸಿಬ್ಬಂದಿ

ಕಿಮ್ಸ್ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ವೈದ್ಯರು ಹಾಗೂ ದಾದಿಯರು ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದಾದಿಯರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಿಮ್ಸ್ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ವೈದ್ಯರು ಹಾಗೂ ದಾದಿಯರು ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದಾದಿಯರು ಮತ್ತು ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರನ್ನು ಕೆಲಸದಿಂದ ತೆಗೆಯಲು ಕಿಮ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಈ ಹಿನ್ನೆಲೆಯಲ್ಲಿ ಡಾ. ಶಿವಲಿಂಗಯ್ಯ ನೇತೃತ್ವದಲ್ಲಿ (ಸಬ್ ಕಮಿಟಿ) ಐದು ಜನರ ಸಮಿತಿ ಒಂದನ್ನು ರಚಿಸಲಾಗಿದೆ ಎಂದು ಒಕ್ಕಲಿಗ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಎರಡು ವಾರಗಳಲ್ಲಿ ಸಮಿತಿ ವರದಿ ನೀಡಲಿದೆ. ಆ ವರದಿ ಆಧರಿಸಿ ಎಷ್ಟು ಮಂದಿಯನ್ನು ಕೆಲಸದಿಂದ ತೆಗೆಯಬೇಕು ಎಂಬುದನ್ನು ಅಂತಿಮಗೊಳಿಸಲಾಗುವುದು. ಸದ್ಯ 40ರಿಂದ 50 ವೈದ್ಯರು ಹಾಗೂ 160ರಿಂದ 200 ಪೂರಕ ಸಿಬ್ಬಂದಿ ಯನ್ನು ವಜಾಗೊಳಿಸಲು ಯೋಚಿಸಲಾಗಿದೆ ಎಂದರು.

ಬಡ್ತಿ, ಕಾಯಂ ಅಸಾಧ್ಯ: ಸಿಬ್ಬಂದಿ ಮುಷ್ಕರ ಕುರಿತು ಪ್ರಸ್ತಾಪಿಸಿದ ಅವರು, ದಾದಿಯರ ಸೇವೆ ಕಾಯಂಗೊಳಿಸಲು ಹಾಗೂ ವೈದ್ಯರಿಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಆಸ್ಪತ್ರೆಯ ಆದಾಯಕ್ಕಿಂತ ವೆಚ್ಚವೇ ಹೆಚ್ಚಿದೆ. ಇತರ ನಾಲ್ಕು ಪ್ರಮುಖ ಆಸ್ಪತ್ರೆಗಳಿಗೆ ಹೋಲಿಸಿದರೆ ನಮ್ಮ ಆಸ್ಪತ್ರೆ ವೈದ್ಯ, ದಾದಿಯರಿಗೆ ಹೆಚ್ಚು ವೇತನ ನೀಡಲಾಗುತ್ತಿದೆ. ಮುಷ್ಕರ ಬಿಟ್ಟು ಮಾತುಕತೆಗೆ ಮುಂದಾದರೆ ಅವರ ವೇತನ ಪರಿಷ್ಕರಣೆ ಮಾಡಿ ಸೇವೆಯಲ್ಲಿ ಮುಂದುವರೆಸಲಾಗುವುದು. ಆಸ್ಪತ್ರೆಯ ವಾರ್ಷಿಕ ವರಮಾನ ರು.95 ಕೋಟಿ. ಆದರೆ, ಖರ್ಚು ರು.110 ಕೋಟಿ ತಗುಲುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಮುಷ್ಕರ ಹಿಂಪಡೆಯಬೇಕು ಎಂದು ಮನವಿ ಮಾಡಿದರು

ಕಿಮ್ಸ್ ದಾದಿ ಅಸ್ವಸ್ಥ
ಬೆಂಗಳೂರು: ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ಕೆಂಪೇಗೌಡ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆ ಎದುರು ಪ್ರತಿಭಟನೆ ನಡುಸುತ್ತಿರುವ ದಾದಿಯರಲ್ಲಿ ಓರ್ವ ಯುವತಿ ಮಂಗಳವಾರ ಅಸ್ವಸ್ಥರಾಗಿದ್ದಾರೆ. ಸೌಮ್ಯ ಎಂಬ ಯುವತಿ ಅಸ್ವಸ್ಥರಾಗಿದ್ದು, ತಕ್ಷಣ ಆಕೆಗೆ ಚಿಕಿತ್ಸೆ ಕೊಡಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com