ಯೋಧ ನಿರಂಜನ್ ಕುಟುಂಬಕ್ಕೆ ಮಾತು ಕೊಟ್ಟು ಮರೆತ ಸಿಎಂ?

ಸಿಯಾಚಿನ್ ಯುದ್ಧ ಭೂಮಿಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹುತಾತ್ಮರಾದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಸಾವಿನ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೋರ್ವ ಯೋಧನನ್ನು ಮರೆತಿದೆಯೇ ಎಂಬ ಅನುಮಾನಗಳು ವ್ಯಕ್ತ...
ಯೋಧ ನಿರಂಜನ್ ಕುಮಾರ್ (ಸಂಗ್ರಹ ಚಿತ್ರ)
ಯೋಧ ನಿರಂಜನ್ ಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಸಿಯಾಚಿನ್ ಯುದ್ಧ ಭೂಮಿಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹುತಾತ್ಮರಾದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಸಾವಿನ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೋರ್ವ ಯೋಧನನ್ನು  ಮರೆತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಕಳೆದ ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರರ ಜತೆಗಿನ ಹೋರಾಟದಲ್ಲಿ ಬೆಂಗಳೂರಿನ ನಿರಂಜನ್‌ಕುಮಾರ್ ಅವರು ಹುತಾತ್ಮರಾಗಿದ್ದರು. ಈ ವೇಳೆ ಅವರ ಕುಟುಂಬಕ್ಕೆ  ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದರು. ಆದರೆ ವಿಪರ್ಯಾಸವೆಂದರೆ ಪರಿಹಾರ ಘೋಷಣೆ ಮಾಡಿ 42 ದಿನಗಳೇ  ಕಳೆದರೂ ನಿರಂಜನ್ ಕುಟುಂಬಕ್ಕೆ ಮಾತ್ರ ಈ ವರೆಗೂ ಪರಿಹಾರದ ಚೆಕ್ ಬಂದಿಲ್ಲ. ಅಲ್ಲದೆ ಸರ್ಕಾರದ ಪರ ಯಾವುದೇ ಸಚಿವರಾಗಲಿ ಅಥವಾ ಸರ್ಕಾರದ ಪ್ರತಿನಿಧಿಗಳಾಗಲಿ ಕನಿಷ್ಠ ಸೌಜನ್ಯಕ್ಕಾದರೂ  ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ ಎಂದು ದೈನಿಕವೊಂದು ವರದಿ ಮಾಡಿದೆ.

ಮಾದರಿಯಾದ ಕೇರಳ ಸರ್ಕಾರ
ಈ ನಡುವೆ ನಿರಂಜನ್ ಕುಮಾರ್ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದ ದಿನವೇ ಕೇರಳ ಸರ್ಕಾರ ಕೂಡ 50 ಲಕ್ಷ ರು. ಪರಿಹಾರ ಧನ ನೀಡುವ ಘೋಷಣೆ ಮಾಡಿತ್ತು.  ಅದರಂತೆ ಮಾತಿಗೆ ತಪ್ಪದ ಕೇರಳ ಸರ್ಕಾರ ಈಗಾಗಲೇ ನಿರಂಜನ್ ಕುಚುಂಬಕ್ಕೆ ಪರಿಹಾರ ವಿತರಣೆ ಮಾಡಿದೆ. ವಾರದ ಹಿಂದೆ ಅಲ್ಲಿನ ಶಾಸಕರು ಮತ್ತು ಪಾಲಿಕೆ ಸದಸ್ಯರು ಖುದ್ದು ನಿರಂಜನ್ ಅವರ  ಮನೆಗೆ ಬಂದು 50 ಲಕ್ಷ ರು. ಮೌಲ್ಯದ ಚೆಕ್ ಕೊಟ್ಟು ಸಾಂತ್ವನ ಹೇಳಿರುವುದಾಗಿ ನಿರಂಜನ್ ತಂದೆ ಇ.ಕೆ.ಶಿವರಾಜನ್ ತಿಳಿಸಿದ್ದಾರೆ.

ಜನವರಿ 4ರಂದು ಜಾಲಹಳ್ಳಿಯ ನ್ಯೂ ಬಿಇಎಲ್ ಶಾಲಾ ಆಟದ ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂಬೈ ಮೇಲಿನ ಉಗ್ರ   ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬಕ್ಕೆ ಪರಿಹಾರ ಕೊಟ್ಟ ಮಾದರಿಯಲ್ಲೇ ನಿರಂಜನ್ ಕುಟುಂಬಕ್ಕೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com