
ಬೆಂಗಳೂರು: ಹೊಸ ವರ್ಷದ ಶುಭಾಶಯ ಕೋರಲು ತಡರಾತ್ರಿ ಪ್ರಿಯತಮೆ ಮನೆ ಹತ್ತಿರ ಬಂದ ಯುವಕನಿಗೆ ಪ್ರಿಯತಮೆ ಕುಟುಂಬದ ಸದಸ್ಯರು ಹಲ್ಲೆ ನಡೆಸಿರುವ ಘಟನೆ ತಡವಾಗಿ
ಬೆಳಕಿಗೆ ಬಂದಿದೆ.
ಕೆ.ನಾರಾಯಣಪುರ ನಿವಾಸಿ ಪ್ರದೀಪ್ ಹಲ್ಲೆಗೆ ಒಳಗಾದವರು. ತನ್ನ ಮನೆ ಸಮೀಪದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಇವರು, ಡಿ.31ರಂದು ತಡರಾತ್ರಿ ಹೊಸ ವರ್ಷದ ಶುಭಾಶಯ ಕೋರಲು ಪ್ರೇಯಸಿ ಮನೆ ಹತ್ತಿರ ಹೋಗಿದ್ದರು. ಈತನನ್ನು ಕಂಡ ಯುವತಿ ಪೋಷಕರು ಮತ್ತು ಕುಟುಂಬ ಸದಸ್ಯರು ಕೋಪೋದ್ರಿಕ್ತರಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರದೀಪ್ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಯುವತಿಯ ತಂದೆ ಜಯರಾಮರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಪ್ರದೀಪ್, ಪದವಿ ಕಲಿಯುತ್ತಿದ್ದಾಗ ಯುವತಿಯ ಮೇಲೆ ಪ್ರೀತಿಯ ಅಂಕುರವಾಗಿದೆ. ಎರಡು ಕುಟುಂಬದ ಸದಸ್ಯರಿಗೆ ಇವರ ಪ್ರೀತಿ ವಿಷಯ ಗೊತ್ತಿರಲಿಲ್ಲ. ಈ ಮಧ್ಯೆ ಡಿ.31ರಂದು ಹೊಸ ವರ್ಷದ ಶುಭಾಶಯ ಕೋರಲು ಪ್ರದೀಪ್ ಯುವತಿ ಮನೆ ಹತ್ತಿರ ತೆರಳಿದ್ದಾರೆ.
ಈ ವೇಳೆ ಯುವತಿ ಪೋಷಕರು ಪ್ರದೀಪ್‍ಗೆ ನೀತಿ ಪಾಠ ಹೇಳಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಯುವತಿ ಪೋಷಕರು ಮತ್ತು ಕುಟುಂಬ ಸದಸ್ಯರು ಪ್ರದೀಪ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿ ಪೋಷಕರ ಕಡೆಯಿಂದ ಪ್ರತಿದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement