ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ, ಶೀಘ್ರವೇ ಗೆಜೆಟ್
ಬೆಂಗಳೂರು: ಸುಪ್ರಿಂಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ಸಿದ್ಧತೆ ನಡೆಸಿರುವ ಸರ್ಕಾರ ಸದ್ಯದಲ್ಲೇ ಆದೇಶ ಹೊರಡಿಸಲಿದೆ.
ದ್ವಿಚಕ್ರವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಗೊಳಿಸುವ ಸಂಬಂಧ ಸುಪ್ರೀಂಕೋರ್ಟ್ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ ನೀಡಿರುವ ಶಿಫಾರಸುಗಳ ಮೇರೆಗೆ ದೇಶಾದ್ಯಂತ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶ ಜಾರಿಗೆ ಅಂತಿಮ ಸಿದ್ಧತೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಆದೇಶ ಜಾರಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಒಂದು ವೇಳೆ ಹೆಲ್ಮೆಟ್ ಕಡ್ಡಾಯಗೊಳಿಸದೇ ಇದ್ದರೆ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಹೆಲ್ಮೆಟ್ ಕಡ್ಡಾಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ, ಒಂದು ವೇಳೆ ಸುಪ್ರಿಂ ಕೋರ್ಟ್ ಆದೇಶ ಪಾಲಿಸದಿದ್ದರೇ ನ್ಯಾಯಾಂಗ -ನಿಂದನೆ ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಅಧಿಸೂಚನೆ ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನದಿಂದ ಜಾರಿಗೆ ಬರಲಿದೆ.ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಸಂಬಂಧ ಸಾರಿಗೆ ಇಲಾಖೆ ಸಾರ್ವಜನಕರಿಂದ ಆಕ್ಷೇಪಣೆ ಮತ್ತು ಸಲಹೆ ಸ್ವೀಕರಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ