ನಗರ ದೇವತೆ ಸೊಗಡು ಮಾಯ: ಡಾ.ಸಿದ್ದಲಿಂಗಯ್ಯ

ಸಿಕ್ಕ ಸಿಕ್ಕಲ್ಲಿ ದೇವಾಲಯಗಳ ನಿರ್ಮಾಣದಿಂದ ಗ್ರಾಮದೇವತೆ, ನಗರ ದೇವತೆಗಳ ಸೊಗಡು ಮಾಯವಾಗಿದೆ. ಫುಟ್ ಪಾತ್ ಮೇಲಿನ ದೇವಾಲಯಗಳಿಂದಬದಲಾವಣೆ ಸಾಧ್ಯವಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ದೈವದ ವಿಕೃತಿ ಕಾಣುತ್ತಿದ್ದೇವೆ ಎಂದು ನಾಡೋಜ ಡಾ.ಸಿದ್ದಲಿಂಗಯ್ಯ ತಿಳಿಸಿದರು...
ನಾಡೋಜ ಡಾ. ಸಿದ್ದಲಿಂಗಯ್ಯ ದಂಪತಿಗೆ ಸನ್ಮಾನ
ನಾಡೋಜ ಡಾ. ಸಿದ್ದಲಿಂಗಯ್ಯ ದಂಪತಿಗೆ ಸನ್ಮಾನ

ಬೆಂಗಳೂರು: ಸಿಕ್ಕ ಸಿಕ್ಕಲ್ಲಿ ದೇವಾಲಯಗಳ ನಿರ್ಮಾಣದಿಂದ ಗ್ರಾಮದೇವತೆ, ನಗರ ದೇವತೆಗಳ ಸೊಗಡು ಮಾಯವಾಗಿದೆ. ಫುಟ್ ಪಾತ್ ಮೇಲಿನ ದೇವಾಲಯಗಳಿಂದ
ಬದಲಾವಣೆ ಸಾಧ್ಯವಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ದೈವದ ವಿಕೃತಿ ಕಾಣುತ್ತಿದ್ದೇವೆ ಎಂದು ನಾಡೋಜ ಡಾ.ಸಿದ್ದಲಿಂಗಯ್ಯ ತಿಳಿಸಿದರು.

ಬಸವನಗುಡಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್ ನಲ್ಲಿ ಭಾನುವಾರ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ ನೀಡಿದ `ಶ್ರೀ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಅವರು, ಬೇರೆಲ್ಲಾ ಪ್ರಶಸ್ತಿಗಳಿಗಿಂತ ಈ ಪ್ರಶಸ್ತಿ ತುಂಬಾ ಖುಷಿ ನೀಡಿದೆ. ಇಂತಹ ಪ್ರಶಸ್ತಿ ನನಗೆ ಸಂದಿರುವುದು ಆಶ್ಚರ್ಯ ಮತ್ತು ಸಂತೋಷ ಎರಡೂ ಒಟ್ಟಿಗೆ ಆಗಿವೆ ಎಂದರು. `ನಾನು ಪಿಯುಸಿನಲ್ಲಿದ್ದಾಗ ಡಾ.ಎಂ.ಎಚ್. ಕೃಷ್ಣಯ್ಯನವರು ಬೋಧಿಸುತ್ತಿದ್ದ ಕುವೆಂಪು ರಚಿತ ಪಾಠಗಳಿಂದ ಪ್ರೇರಣೆಯಾಗಿ ಸಾಹಿತ್ಯ ವಿದ್ಯಾರ್ಥಿಯನ್ನಾಗಿಸಿತು. ನಂತರ ಕೀರಂ ನಾಗರಾಜು, ಡಿ.ಆರ್. ನಾಗರಾಜು, ಜಿ.ಎಸ್.ಶಿವರುದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳಿಂದ ದೊಡ್ಡಮಟ್ಟದಲ್ಲಿ ಸಾಹಿತ್ಯ ರಚಿಸಲು ಸಹಕಾರ ನೀಡಿದರು' ಎಂದು ಹೇಳಿದರು.

ಸಂಶೋಧಕ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಸಾಹಿತಿ ಬಿ. ಎಂ. ಶ್ರೀಕರಂಠಯ್ಯನವರು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸುವ ಲಕ್ಷಣ ಮತ್ತು ಲಕ್ಷ್ಯ ತೋರಿದವರು. ಅವರ ಕೃತಿಗಳಲ್ಲಿನ ರೂಪಕಗಳು ಭಿನ್ನವಾಗಿವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಲವಾರು ನೂತನ ಪ್ರಯೋಗಗಳನ್ನು ಮಾಡಿದ್ದಾರೆ ಎಂದರು. ಅದೇ ರೀತಿ ಆವಿಷ್ಕಾರದ ಪ್ರಕ್ರಿಯೆಗಳಲ್ಲಿ ಡಾ.ಸಿದ್ದಲಿಂಗಯ್ಯ ಮತ್ತು ಡಿ. ಆರ್.ನಾಗರಾಜು ಮೊದಲಿಗರು, ಸಿದ್ದಲಿಂಗಯ್ಯನವರಲ್ಲಿನ ವಿನಯದ ಗುಣ ತುಂಬಾ ಎತ್ತರಕ್ಕೆ ಬೆಳೆಯುವಂತೆ ಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಮಾತನಾಡಿ, ಸಾಮಾಜಿಕ ಪ್ರಜ್ಞೆ ಮತ್ತು ರಾಜಕೀಯ ದೃಷ್ಟಿಕೋನ ಮತ್ತು ಜನಪದ ಲಯದಲ್ಲಿ ಜನರ ಆಶಯಗಳೇನು ಎಂಬುದನ್ನು ಸಿದ್ದಲಿಂಗಯ್ಯನವರು ಚಿಕ್ಕಂದಿನಿಂದಲೇ ಅರಿತಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾ.ಎ.ಜೆ.ಸದಾಶಿವ, ಪ್ರಸ್ತುತ ಸಮಾಜದಲ್ಲಿ ಅನ್ಯಾಯವನ್ನು ಪ್ರತಿಭಟಿಸಿದರೆ ದ್ವೇಷ ಕಟ್ಟಿಕೊಳ್ಳಬೇಕೇ ವಿನಃ ಮತ್ತೇನೂ ಪ್ರಯೋಜನವಿಲ್ಲ. ನೋವನ್ನು ಅನುಭವಿಸಿದವರಿಗೆ ಮಾತ್ರ ಅದರ ಅರಿವಿರುತ್ತದೆ. ಕೆಲವರು ಅದನ್ನು ದ್ವೇಷವನ್ನಾಗಿ ರೂಪಿಸಿದರೆ ಮತ್ತೂ ಕೆಲವರು ಬದಲಾವಣೆ ತರಲು ಮುಂದಾಗುತ್ತಾರೆ. ನಾನು ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ಎಲ್ಲರಿಗೂ ನ್ಯಾಯ ದೊರೆತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಅನ್ಯಾಯ ಮಾತ್ರ ಆಗಿಲ್ಲ ಎಂದರು.

ಬಿಎಂಶ್ರೀ 131ನೇ ಜನ್ಮದಿನದ ಅಂಗವಾಗಿ ಡಾ.ಸಿದ್ದಲಿಂಗಯ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, ಅಧ್ಯಕ್ಷ ಡಾ.ಪಿವಿ. ನಾರಾಯಣ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com