ಭೂ ಒತ್ತುವರಿ ತೆರವು ಮಹತ್ವದ ಕಾರ್ಯ: ಸಂಸದ ಮೋಹನ್

ಭೂಗಳ್ಳರು ಒತ್ತುವರಿ ಮಾಡುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಮತ್ತೆ ಸರ್ಕಾರದ ವಶಕ್ಕೆ ಪಡೆಯುವ ಕಂದಾಯ ಇಲಾಖೆ ಕಾರ್ಯ
ಪಿ,ಸಿ ಮೋಹನ್
ಪಿ,ಸಿ ಮೋಹನ್

ಬೆಂಗಳೂರು:  ಭೂಗಳ್ಳರು ಒತ್ತುವರಿ ಮಾಡುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಮತ್ತೆ ಸರ್ಕಾರದ ವಶಕ್ಕೆ ಪಡೆಯುವ ಕಂದಾಯ ಇಲಾಖೆ ಕಾರ್ಯ ಮಹತ್ವವಾದುದು ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು. ಕಂದಾಯ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಂದಾಯ ಇಲಾಖೆಯು ಪ್ರತಿದಿನ ಜನಸಂಪರ್ಕದಲ್ಲಿರುತ್ತದೆ. ಇಂತಹ ಇಲಾಖೆಯ ಕಾರ್ಮಿಕರು ಸಲ್ಲಿಸಿರುವ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಲಿದೆ ಎಂಬ ನಂಬಿಕೆ ಇದೆ. ಇದೇ ಭವನದ ಸಭಾಂಗಣ ಅಭಿವೃದ್ಧಿಗಾಗಿ ರು. 25 ಲಕ್ಷ ಬಿಡುಗಡೆ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗ ಗುರುತಿಸಿದರೆ ಸರ್ಕಾರಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ರು. 20 ಲಕ್ಷ ಬಿಡುಗಡೆ ಮಾಡಲು ಸಿದ್ಧರಿರುವುದಾಗಿ ಭರವಸೆ ನೀಡಿದರು.

ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಮಾತನಾಡಿ, ಇಲಾಖೆಯಲ್ಲಿ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅದನ್ನು ಎದುರಿಸುವುದು ಸವಾಲಿನ ಕೆಲಸವಾಗಿದೆ. 35 ವರ್ಷದೊಳಗಿನ ಹೆಚ್ಚಿನ ಯುವಕರು ಕೆಲಸಕ್ಕೆ ಸೇರುತ್ತಿರುವುದರಿಂದ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತ ತರಬೇತಿ ಅವಶ್ಯಕತೆ ಇದೆ ಎಂದು ಹೇಳಿದರು. ಪ್ರಾದೇಶಿಕ ಕಚೇರಿಯನ್ನು ಕಂದಾಯ ಭವನಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳಾಂತರಿಸಿದರೆ ಜನರಿಗೂ ಒಂದೇ ಕಡೆ ಮಾಹಿತಿ ಸಿಗಲಿದೆ. ಅಧಿಕಾರಿಗಳು ಸಹ ಎರಡು ಕಡೆ ಓಡಾಡುವುದು ತಪ್ಪಲಿದೆ ಎಂದ ಅವರು,

ಅಧಿಕಾರಿಗಳು ತೆರವುಗೊಳಿಸುವ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರದಲ್ಲಿ ಅನುದಾನದ ಕೊರತೆ ಕಾಡುತ್ತಿದೆ ಎಂದು ಹೇಳಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮಾತನಾಡಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ತಹಸೀಲ್ದಾರ್‍ವರೆಗಿನ ಕಾರ್ಯ ಮಹತ್ತರವಾದುದು. ಈ ಹಿನ್ನೆಲೆಯಲ್ಲಿ ಒತ್ತುವರಿಯಾದ ಜಮೀನುಗಳ ಬಗ್ಗೆ ಪ್ರತಿ ವಾರ ಮಾಹಿತಿ ನೀಡುವಂತೆ ತಿಳಿಸಿದರು. ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾದೇಶಿಕ ಆಯುಕ್ತೆ ಜಯಂತಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎ. ಅಪ್ಪಾಜಿಗೌಡ ಸೇರಿದಂತೆ ಅನೇಕ ಅಧಿ ಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com