
ಬೆಂಗಳೂರು: ದಿನನಿತ್ಯ ಕುಡಿದು ಮನೆಗೆ ಬಂದು ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಗಂಡನನ್ನು ತನ್ನ ಸಹೋದರನ ಜೊತೆ ಸೇರಿ ಪತ್ನಿಯೇ ಹತ್ಯೆಗೈದಿರುವ ಘಟನೆ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿ ಗುರುವಾರ ನಡೆದಿದೆ.
ಹೆಚ್‍ಎಎಲ್ ಬಳಿಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ (39) ಕೊಲೆಯಾದ ವ್ಯಕ್ತಿ. ಕೆ.ಆರ್.ಪುರದ ಭಟ್ಟರಹಳ್ಳಿ ವಾಸಿಯಾಗಿದ್ದ ಮಾರುತಿ ಕಳೆದ 15 ವರ್ಷಗಳ ಹಿಂದೆ ದಾಸರಹಳ್ಳಿಯ ಶಾರದ ಎಂಬುವರನ್ನು ವಿವಾಹವಾಗಿದ್ದರು. ಇವರಿಗೆ ವಿಕಲಚೇತನ ಪುತ್ರ ಆದಿತ್ಯ ಹಾಗೂ ಪುನೀತ್ ಎಂಬ ಗಂಡು ಮಕ್ಕಳಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ಮಾರುತಿ ಕುಡಿದ ಅಮಲಿನಲ್ಲಿ ಮನೆಗೆ ಬರುತ್ತಿದ್ದ. ವಿನಾಃಕಾರಣ ಪತ್ನಿಯ ಮೇಲೆ ಜಗಳ ಮಾಡುತ್ತಿದ್ದ.
ಈ ಸಂಬಂಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೌಟುಂಬಿಕ ವಿಚಾರವಾದ ಕಾರಣ ಸಂಧಾನ ಮಾಡಿಕೊಳ್ಳುವುದಾಗಿ ಶಾರದ ಪೊಷಕರು ಬುಧವಾರ ಸಂಜೆ ಠಾಣೆಯಿಂದ ಇಬ್ಬರನ್ನು ಕರೆದೊಯ್ದಿದ್ದರು. ಠಾಣೆಯಿಂದ ಹೋದ ಮಾರುತಿ ಮನೆಗೆ ಹೋಗಿರಲಿಲ್ಲ, ಗುರುವಾರ ಬೆಳಗಿನ ಜಾವ 3ಗಂಟೆ ಸುಮಾರಿಗೆ ಕಂಠ ಪೂರ್ತಿ ಕುಡಿದು ಮನೆಗೆ ಹೋಗಿ ಮತ್ತೆ ಜಗಳ ಮಾಡಿದ್ದಾನೆ.
ಇದರಿಂದ ಕೋಪಗೊಂಡ ಪತ್ನಿ ಶಾರದ ತನ್ನ ಸಹೋದರ ಧನರಾಜ್ ನನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಶಾರಧ ಮತ್ತು ಆಕೆಯ ಸಹೋಧರ ಮುದ್ದೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಕುಸಿದು ಬಿದ್ದ ಮಾರುತಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement