ಮಕ್ಕಳನ್ನು ಕಾನ್ವೆಂಟ್‍ಗೆ ಸೇರಿಸುತ್ತಿರುವ ಪೋಷಕರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಬೇಕೆಂಬ ಪ್ರವೃತ್ತಿ ಪೋಷಕರಲ್ಲಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ...
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಬೇಕೆಂಬ ಪ್ರವೃತ್ತಿ ಪೋಷಕರಲ್ಲಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂಗ್ಲಿಷ್  ಮಾಧ್ಯಮದಲ್ಲಿ ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆಂಬ ಮೂಢನಂಬಿಕೆಯಿಂದ ಪೋಷಕರು ಹೊರ ಬರಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ `ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಆಗಬೇಕೆಂಬ ಮನೋಭಾವ ಪೋಷಕರಲ್ಲಿಯೂ ಬೆಳೆಯಬೇಕು. ಕನ್ನಡದಲ್ಲಿಯೇ ಕಲಿಯಬೇಕು ಎಂಬ ಆಸಕ್ತಿ ಮಕ್ಕಳಲ್ಲಿ ಮೂಡಿದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮತ್ವ ಪಡೆಯಲಿದೆ ಎಂದು
ತಿಳಿಸಿದರು.

ಸುಪ್ರೀಂಕೋರ್ಟ್‍ನ ಭಾಷಾ ಮಾಧ್ಯಮ ಆದೇಶದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಎಲ್ಲ ಮುಖ್ಯಮಂತ್ರಿಗಳ ಜತೆ ಸಭೆ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಈ ವರೆಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಭಾಷಾ ಸಮಸ್ಯೆ ಕರ್ನಾಟಕದಲ್ಲಿ ಮಾತ್ರವಲ್ಲ, ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗಲಿದೆ. ಅಗತ್ಯವಿದ್ದರೆ ಸಂವಿಧಾನ ತಿದ್ದುಪಡಿ ಮಾಡಲಿ ಎಂದು ಸಲಹೆ ನೀಡಿದರು.

ಕನ್ನಡ ಆಡಳಿತ ಭಾಷೆಯಾಗಬೇಕು:ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸುವುದು ದೊಡ್ಡಸ್ತಿಕೆ ಎಂಬ ಹುಂಬುತನದಿಂದ ಬೀಗುತ್ತಿರುವ ಪೋಷಕರು ಕನ್ನಡ ಮಾಧ್ಯಮದಲ್ಲಿಯೇ ಓದಿ ವೈದ್ಯಕೀಯ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರನ್ನೊಮ್ಮೆ ನೋಡಲಿ. ಕನ್ನಡ ಆಡಳಿತ ಭಾಷೆಯಾಗಬೇಕು. ನ್ಯಾಯಾಲಯಗಳಲ್ಲಿಯೂ ಕನ್ನಡದಲ್ಲಿಯೇ ವಾದ- ವಿವಾದಗಳು ನಡೆಯಬೇಕು. ಆಡಳಿತ ಭಾಷೆ ಅನುಷ್ಠಾನವಾದಲ್ಲಿ ಭಾಷೆ ಬಗೆಗಿನ ಗೌರವ ಹೆಚ್ಚುವುದರ ಜತೆಗೆ ಕನ್ನಡಿಗರಿಗೆ ಅನುಕೂಲವಾಗಲಿದೆ, ಇಂಗ್ಲಿಷ್ ವ್ಯಾಮೋಹ ತೊರೆಯಿರಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾದಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಗಡಿನಾಡ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಿರುವಂತೆ ಉದ್ಯೋಗದಲ್ಲಿಯೂ ಶೇ.5 ಮೀಸಲಾತಿ ನೀಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ಎಸ್‍ಎಸ್‍ಎಲ್‍ಸಿಯ 1091 ಮತ್ತು ಪಿಯುಸಿಯ 920 ಮಕ್ಕಳು ಸೇರಿ ಒಟ್ಟಾರೆ 2011 ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿದರು. ತಾಲೂಕಿಗೆ ಮೂವರಿಗೆ ನೀಡುತ್ತಿದ್ದ ಪ್ರಶಸ್ತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಐವರು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಸಮಾರಂಭದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಕಿಮ್ಮನೆ ರತ್ನಾಕರ, ರೋಷನ್ ಬೇಗ್, ಕವಿ ಎಚ್. ಎಸ್. ವೆಂಕಟೇಶಮೂರ್ತಿ, ಸಂಸದ ಕೆ.ಎಚ್. ಮುನಿಯಪ್ಪ, ಶಿಕ್ಷಣ ಇಲಾಖೆ ಆಯುಕ್ತ ಸತ್ಯಮೂರ್ತಿ ಉಪಸ್ಥಿತರಿದ್ದರು.

ಕನ್ನಡದವರನ್ನೇ ಲೋಕಾಯುಕ್ತ ಮಾಡಿ. ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕನ್ನಡ ಅಭಿವೃದ್ಧಿ ಪ್ರಾದಿಕಾರ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, `ಹಾಗಾದರೆ ಕನ್ನಡ ಅರಿತಿರುವವರನ್ನೇ ಲೋಕಾಯುಕ್ತರನ್ನಾಗಿ ಆಯ್ಕೆ ಮಾಡಿ' ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, `ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಸಾರ್ವಜನಿಕ ಕೆಲಸ. ಆಯ್ಕೆ ಸಮಿತಿ ಜತೆ ಚರ್ಚೆ ನಡೆಸಿಯೇ ಆಯ್ಕೆ  ಮಾಡಲಾಗುತ್ತದೆ. ನಾನೊಬ್ಬನೇ ನಿರ್ಧಾರ ಮಾಡಲಾಗುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com