ಪೊಲೀಸ್ ಸರ್ಪಗಾವಲಲ್ಲಿ ಸಾಹಿತ್ಯ ಪ್ರಶಸ್ತಿ ಪ್ರದಾನ

ಹಿಂದೆಂದೂ ಕಂಡರಿಯದಷ್ಟು ಬಿಗಿ ಪೊಲೀಸ್ ಭದ್ರತೆ ನಡುವೆ ಶನಿವಾರ ಬೆಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಮಾಡಲಾಯಿತು...
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು: ಹಿಂದೆಂದೂ ಕಂಡರಿಯದಷ್ಟು ಬಿಗಿ ಪೊಲೀಸ್ ಭದ್ರತೆ ನಡುವೆ ಶನಿವಾರ ಬೆಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಹೆಜ್ಜೆ-ಹೆಜ್ಜೆಗೂ ಪೊಲೀಸರಿಂದ ತುಂಬಿದ್ದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುವ ಮೂಲಕ ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರಕ್ಕೂ ಸಹಿಷ್ಣು ಅಸಹಿಷ್ಣುತೆಯ ಕಳಂಕ  ಅಂಟಿಕೊಂಡುಬಿಟ್ಟಿತು. ಸಾಹಿತ್ಯ ಅಕಾಡೆಮಿಯ 2013ನೇ ವರ್ಷದ ಗೌರವ ಪ್ರಶಸ್ತಿಗೆ ಕೆಎಸ್ ಭಗವಾನ್ ಆಯ್ಕೆಯಾಗಿದ್ದರು. ಭಗವಾನ್ ಅವರಿಗೆ ಗೌರವ ಪ್ರಶಸ್ತಿ ಪ್ರಕಟಿಸಿದ್ದರಿಂದ ಕೆಲವರು  ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರ್ವಜನಿಕವಾಗಿ ಭಾರಿ ಚರ್ಚೆಗಳೂ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಗಿ  ಪೊಲೀಸ್ ಬಂದೋಬಸ್ತ್ ನಡುವೆ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಮಾಧ್ಯಮದವರು ಹಾಗೂ ಆಹ್ವಾನ ಪತ್ರಿಕೆ ಹೊಂದಿದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ  ಪ್ರವೇಶ ನೀಡಲಾಗಿತ್ತು. 2013ನೇ ವರ್ಷದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದ ವಿಚಾರವಾದಿ ಪ್ರೊ. ಕೆ ಎಸ್ ಭಗವಾನ್, ಡಾ ಬಿ ಎನ್ ಸುಮಿತ್ರಾಬಾಯಿ, ಸಾಹಿತಿ ಡಾ ರಾಜೇಂದ್ರ ಚೆನ್ನಿ,  ಕತೆಗಾರ ಡಾ ಮೊಗಳ್ಳಿ ಗಣೇಶ್ ಪ್ರಶಸ್ತಿ ಸ್ವೀಕರಿಸಿದರೆ ವಿಮರ್ಶಕ ಡಾ ರಹಮತ್ ತರೀಕೆರೆ ಹಾಗೂ 2012ನೇ ವರ್ಷದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದ ಸಂಶೋಧಕ ಪ್ರೊ ಶೆಟ್ಟರ್  ಹಾಗೂ ಬರಹಗಾರ ಟಿ ಕೆ ದಯಾನಂದ ಪ್ರಶಸ್ತಿ ಸ್ವೀಕರಿಸಲಿಲ್ಲ. ಉಳಿದಂತೆ 2012ನೇ ವರ್ಷದ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದ ಲೇಖಕರಾದ ಪ್ರತಿಭಾ ನಂದಕುಮಾರ್, ಡಾ  ಕೃಷ್ಣಮೂರ್ತಿ ಹನೂರು, ಕೆ ಸತ್ಯ ನಾರಾಯಣ, ಬಿ ಸುರೇಶ್, ಚಿಂತಾಮಣಿ ಕೊಡ್ಲೆಕೆರೆ, ಶ್ರೀನಿವಾಸ ಜೋಕಟ್ಟೆ, ಎ ಎಂ ಮದರಿ, ಎಸ್ ಆರ್ ವಿಜಯಶಂಕರ್, ಜಿ ಅಶ್ವತ್ಥನಾರಾಯಣ, ಸಿ ಎಂ ಗೋವಿಂದರೆಡ್ಡಿ, ಪಿ ಸತ್ಯನಾರಾಯಣ ಭಟ್, ಎಂ ಎ ಹೆಗಡೆ, ಷ ಶೆಟ್ಟರ್, ಆರ್ ಪೂರ್ಣಿಮಾ, ಈಶ್ವರಚಂದ್ರ, ರವಿಕುಮಾರ ಕಾಶಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಯಾದ   ಲೇಖಕರಾದ  ಕಲ್ಕುಳಿ ವಿಠಲ್ ಹೆಗ್ಗಡೆ, ಭಾರ್ಗವಿ ನಾರಾಯಣ್, ಕೆ ಕೇಶವಶರ್ಮ, ಓ ಎಲ್ ನಾಗಭೂಷಣಸ್ವಾಮಿ, ಸ್ಮಿತಾ ಮಾಕಳ್ಳಿ, ಸಿ ಆರ್ ಸತ್ಯ ಅವರಿಗೆ ಮುಖ್ಯ ಅತಿಥಿಯಾಗಿ  ಭಾಗವಹಿಸಿದ್ದ ಬಂಗಾಲಿ ಕವಿ ಡಾ ಸುಬೋಧ್ ಸರ್ಕಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಸುಬೋಧ್ ಸರ್ಕಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಬಂಗಾಲಿ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಅನುವಾದ ಕಾರ್ಯ ಹಮ್ಮಿಕೊಳ್ಳಬೇಕು. ಇದರಿಂದ  ಕನ್ನಡದ ಸಾಹಿತ್ಯ ವನ್ನು ಬಂಗಾಳಿಗಳು ಹಾಗೂ ಬಂಗಾಳಿ ಸಾಹಿತ್ಯವನ್ನು ಕನ್ನಡಿಗರು ಓದುವಂತಾಗುತ್ತದೆ. ಕನ್ನಡ ಸಾಹಿತ್ಯ ಇದುವರೆಗೆ 8 ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಬೇರೆ  ಯಾವುದೇ ರಾಜ್ಯ ಮಾಡದ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಅಕಾಡೆಮಿ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ  ಉಪಸ್ಥಿತರಿದ್ದರು.

ಬಾಯಿಬಡುಕತನ ಅಪಾಯಕಾರಿ
ರಾಜಕೀಯ ವಲಯಕ್ಕೆ ಸೀಮಿತವಾಗಿದ್ದ ಬಾಯಿಬಡುಕತನ ಶೈಕ್ಷಣಿಕ ಕ್ಷೇತ್ರವನ್ನೂ ಪ್ರವೇಶಿಸಿ ವಾತಾವರಣವನ್ನು ಕಲುಷಿತಗೊಳಿಸಿದೆ. ಆರ್ಥಿಕ  ಕ್ಷೇತ್ರದಲ್ಲಿ ಕೊಳ್ಳುಬಾಕತನ  ಏಕಮುಖವಾಗಿ ಬೆಳೆದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಬಾಯಿಬಡುಕತನ ಏಕರೇಖಾತ್ಮಕವಾಗಿ ವಿಸ್ತರಿಸುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿ  ಸಿದರು. ಈ ಎರಡು ಬೆಳವಣಿಗೆಯಿಂದ ಸಾಮಾಜಿಕ  ವಾತಾವರಣ ಕಲುಷಿತವಾಗುತ್ತಿದ್ದು, ಸಾಂಸ್ಕೃತಿಕ ಯುದ್ಧ ಆರಂಭವಾಗಿದೆ. ಮಹಾಭಾರತ, ರಾಮಾಯಣ ಹಿಂದೂ  ಧರ್ಮಗ್ರಂಥಗಳಲ್ಲ. ಅವುಗಳು ಆಯಾ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುವ ಸಾಹಿತ್ಯ ಗ್ರಂಥಗಳು. ಈ ಗ್ರಂಥಗಳನ್ನು ಸನಾತನ ವ್ಯವಸ್ಥೆಯ ಗರ್ಭಗುಡಿ ವಿಮರ್ಶಕರು ಪುರಾಣಲವೆಂದು, ಪುರಾಣವನ್ನು ಶಾಸ್ತ್ರಾಂಗವೆಂದು ವ್ಯಾಖ್ಯಾನಿಸಿದರು. ಇವರು ಮಾಡಿದ ತಪ್ಪನ್ನು ತಿದ್ದಲು ಹೋಗುತ್ತಿರುವ ಈಗಿನ ವಿಮರ್ಶಕರು ಪರಿಶೀಲನೆ ಮಾಡುವ  ಬದಲು  ಗರ್ಭಪಾತ ಮಾಡುತ್ತಿದ್ದಾರೆ ಎಂದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಟೀಕಿಸಿದರು.

ಕಾರ್ಯಕ್ರಮಕ್ಕೆ ಪಾಸಿಲ್ಲ , ಪ್ರವೇಶವೂ ಇಲ್ಲ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರನ್ನು ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಬಳಿಯೇ ಸ್ಕ್ಯಾನಿಂಗ್ ಮಾಡಿ ಒಳಬಿಡಲಾಗುತ್ತಿತ್ತು. ಆನಂತರ ಸಭಾಭವನ ಪ್ರವೇಶಕ್ಕೆ ಮುನ್ನವೂ  ಪೊಲೀಸರು ಪಾಸ್ ಇದ್ದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು. ಪಾಸ್ ಇಲ್ಲದೇ ಬಂದಿದ್ದ ಅನೇಕ ಸಾಹಿತ್ಯ ಪ್ರೇಮಿಗಳಿಗೆ ಭದ್ರತೆ ನೆಪದಲ್ಲಿ ಒಳಗೆ ಬಿಡಲಿಲ್ಲ. ಒಳಭಾಗದಲ್ಲಿ ಆಸನಗಳ ಪ್ರತಿ  ಸಾಲಿನಲ್ಲೂ ಮಫ್ತಿಯಲ್ಲಿ ಇಬ್ಬಿಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು.

ಬರವಣಿಗೆ ಮತ್ತು ಹೇಳಿಕೆ ರಾಜಕೀಕರಣವಾಗುತ್ತಿದ್ದು, ಉತ್ಪ್ರೇಕ್ಷತೆಯಿಂದ ಆವರಿಸುತ್ತಿದೆ. ಇದರಿಂದ ಹೊರಬರಲು ಸಂದರ್ಭಕ್ಕೆ ತಕ್ಕ ಹಾಗೆ ಸಕ್ರಿಯವಾಗಬೇಕೆ ವಿನಃ  ಪ್ರತಿಕ್ರಿಯಿಸಬಾರದು.
-ಪ್ರತಿಭಾ ನಂದಕುಮಾರ್, ಪ್ರಶಸ್ತಿ ಪುರಸ್ಕೃತರು

ಪ್ರಶಸ್ತಿ ಪ್ರಕಟಿಸಿ ಎಷ್ಟೇ ವಿರೋಧ ವ್ಯಕ್ತವಾದರೂ ಸಾಹಿತ್ಯ ಅಕಾಡೆಮಿ ತಾನು ತೆಗೆದುಕೊಂಡ ನಿಲುವನ್ನು ಪ್ರತಿಪಾದಿಸುವ ಮುಖೇನ ಅಸಹಿಷ್ಣುತೆಗೆ ಸೆಡ್ಡು ಹೊಡೆದೆದ್ದು ಬದ್ಧತೆಯನ್ನು  ತೋರಿಸುತ್ತದೆ.
-ಡಾ ರಾಜೇಂದ್ರ ಚೆನ್ನಿ ಪ್ರಶಸ್ತಿ ಪುರಸ್ಕೃತರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com