ಬದಲಾವಣೆ ತರಲು ಟಿಡಿಆರ್ ಪ್ರಕ್ರಿಯೆ ಸ್ಥಗಿತ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗಲೀಕರಣವಾಗುವ ರಸ್ತೆಗಳ ಪಟ್ಟಿ, ಕಾಮಗಾರಿ ಆರಂಭ ಹಾಗೂ ಪೂರ್ಣಗೊಳಿಸುವ ಅವಧಿ ಸೇರಿದಂತೆ ಸಂಪೂರ್ಣ ವಿವರವನ್ನು ಶೀಘ್ರದಲ್ಲೇ ನೀಡುವಂತೆ ಮೇಯರ್ ಬಿ.ಎನ್.ಮಂಜುನಾಥರೆಡ್ಡಿ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು...
ಬಿಬಿಎಂಪಿಯಲ್ಲಿ ಬುಧವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಹಿಳಾ ಕಾರ್ಪೊರೇಟರುಗಳು ಚರ್ಚೆಯನ್ನು ಗಂಭೀರವಾಗಿ ಆಲಿಸುತ್ತಿರುವುದು.
ಬಿಬಿಎಂಪಿಯಲ್ಲಿ ಬುಧವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಹಿಳಾ ಕಾರ್ಪೊರೇಟರುಗಳು ಚರ್ಚೆಯನ್ನು ಗಂಭೀರವಾಗಿ ಆಲಿಸುತ್ತಿರುವುದು.
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗಲೀಕರಣವಾಗುವ ರಸ್ತೆಗಳ ಪಟ್ಟಿ, ಕಾಮಗಾರಿ ಆರಂಭ ಹಾಗೂ ಪೂರ್ಣಗೊಳಿಸುವ ಅವಧಿ ಸೇರಿದಂತೆ ಸಂಪೂರ್ಣ ವಿವರವನ್ನು ಶೀಘ್ರದಲ್ಲೇ ನೀಡುವಂತೆ ಮೇಯರ್ ಬಿ.ಎನ್.ಮಂಜುನಾಥರೆಡ್ಡಿ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆಯೇ ಹಲವೆಡೆ ರಸ್ತೆ ಅಗಲೀಕರಣಕ್ಕೆ ಜಾಗ ವಶಪಡಿಸಿಕೊಳ್ಳಲಾಗಿದೆ. ಆದರೆ, ಸಂಬಂಧಪಟ್ಟ ಮಾಲೀಕರಿಗೆ ಇದುವರೆಗೂ ಪರಿಹಾರ ರೂಪದಲ್ಲಿ ಟಿಡಿಆರ್ ನೀಡದಿರುವುದರಿಂದ ಆತಂಕ ಎದುರಾಗಿದೆ.

ಟಿಡಿಆರ್ ನೀಡದಿರುವುದರಿಂದ ಆಸ್ತಿಯನ್ನು ಬೇರೆಯವರಿಗೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇದರ ಲಾಭ ಪಡೆಯುತ್ತಿರುವ ಕೆಲ ಬಂಡವಾಳಶಾಹಿಗಳು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಮಾಲೀಕರಲ್ಲಿ ಆತಂಕ ಉಂಟಾಗಿದೆ ಎಂದು ಸದಸ್ಯ ಗುಣಶೇಖರ್ ವಿವರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಜಿ.ಕುಮಾರನಾಯ್ಕ್ ಅಗಲೀಕರಣಕ್ಕೆ ಸುಮಾರು 200 ರಸ್ತೆಗಳನ್ನು ಗುರುತಿಸಲಾಗಿದೆ. ಆದರೆ, ಟಿಡಿಆರ್ ನೀಡುವಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೆ, ಟಿಡಿಆರ್ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಹೀಗಾಗಿ ಟಿಡಿಆರ್ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದ್ದು, ಹೊಸ ನಿಯಮ ಜಾರಿಗೆ ಬಂದಾಗ ಬಾಕಿ ಉಳಿದಿರುವ ಟಿಡಿಆರ್ ನೀಡಲಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಹಳೆ ಅಧಿಕಾರಿಗಳನ್ನು ವರ್ಗಾಯಿಸಿ: ಹಲವು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಕಂದಾಯ ಅಧಿಕಾರಿಗಳನ್ನು ಒಂದು ವಾರದೊಳಗೆ ವರ್ಗಾವಣೆ ಮಾಡುವಂತೆ ಮೇಯರ್ ಸೂಚಿಸಿದರು. ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ಕ್ಷೇತ್ರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಬಿಡಿಎ ಜಾಗವನ್ನು ಖಾತೆ ಮಾಡಿಕೊಡುವಲ್ಲಿ ಕಂದಾಯ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಅಲ್ಲದೆ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರು ಸೂಚಿಸಿದರೂ, ನಿರ್ಲಕ್ಷಿಸುತ್ತಿದ್ದಾರೆ. ಜೊತೆಗೆ, ಆಡಳಿತ ವಿಭಾಗದ ಅಪರ ಆಯುಕ್ತ ಹೇಮಾಜಿ ನಾಯಕ್ ಅವರು ಶಾಸಕರ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ ಎಂದು ದೂರಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹಾಗೂ ಕಟ್ಟೆ ಸತ್ಯನಾರಾಯಣ ಅವರು ದನಿಗೂಡಿಸಿದರು.

ಅಧಿಕಾರಿಗಳು 3 ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಕಡೆ ಕರ್ತವ್ಯ ನಿರ್ವಹಿಸುವಂತಿಲ್ಲ. ಬಿಬಿಎಂಪಿ ಅಧಿಕಾರಿಗಳು ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ನಿರ್ವಹಿಸಿದ್ದು, ಜನಪ್ರತಿನಿ„ಗಳ ಮಾತಿಗೆ ಬೆಲೆ ಕೊಡುತ್ತಿಲ್ಲ. ಹೀಗಾಗಿ ಠಿಕಾಣಿ ಹೂಡಿರುವವರನ್ನು ಬೇರೆಡೆ ವರ್ಗಾಯಿಸುವಂತೆ ಹಲವು ಬಾರಿ ಪತ್ರ ಬರೆದರೂ, ಇದುವರೆಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹಳೆ ಅಧಿಕಾರಿಗಳ ಜಾಗಕ್ಕೆ ಹೊಸಬರನ್ನು ನೇಮಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸತೀಶ್ ರೆಡ್ಡಿ, ಪದ್ಮನಾಭ ರೆಡ್ಡಿ ಹಾಗೂ ಕಟ್ಟೆ ಸತ್ಯನಾರಾಯಣ ಒತ್ತಾಯಕ್ಕೆ ಮಣಿದ ಮೇಯರ್, ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಒಂದು ವಾರದೊಳಗೆ ವರ್ಗಾಯಿಸಬೇಕು. ಇವರ ಜಾಗಕ್ಕೆ ನೂತನ ಅಧಿಕಾರಿಗಳನ್ನು ನೇಮಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಮೇಯರ್ ಸೂಚಿಸಿದರು.

ಉತ್ತೀರ್ಣರಾಗದಿದ್ದರೂ ಸೇವೆ: ಬಿಬಿಎಂಪಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಎರಡು ವರ್ಷದ ಒಳಗೆ ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇಲ್ಲವಾದಲ್ಲಿಅವರನ್ನು ಸೇವೆಯಿಂದ ತೆಗೆದುಹಾಕಬೇಕೆಂಬ ನಿಯಮವಿದೆ. ಆದರೆ, ನಿಯಮಗಳನ್ನು ಗಾಳಿಗೆ  ತೂರಿ ಸುಮಾರು 62 ಅ„ಕಾರಿಗಳನ್ನು ಸೇವೆಯಲ್ಲಿ ಮುಂದುವರಿಸಿರುವುದರ ಹಿಂದೆ ಪಾಲಿಕೆ ಅಧಿಕಾರಿಗಳ ಕೈವಾಡವಿದೆ. ಹಾಗಾಗಿ ತಪ್ಪಿತಸ್ಥರ ವಿರುದಟಛಿ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದರು.

2010ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು, ಇಲಾಖೆ ಪರೀಕ್ಷೆ ಪಾಸು ಮಾಡದ ಸಿಬ್ಬಂದಿಯನ್ನು ಸೇವೆಯಿಂದ ನಿವೃತ್ತಿಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆಯಕಟ್ಟಿನ ಪ್ರದೇಶಗಳು ಹಾಗೂ ಆಯುಕ್ತರ ಕಚೇರಿಯಲ್ಲಿ ಸೂಕ್ತ ಜ್ಞಾನವಿಲ್ಲದ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕೆಂಬ ನಿಯಮವಿದೆ. ಆದರೆ, ಪಾಲಿಕೆಯ ವಿವಿಧ ಇಲಾಖೆಯಲ್ಲಿ ಸುಮಾರು 62 ಸಿಬ್ಬಂದಿ 2 ವರ್ಷದಲ್ಲಿ ಇಲಾಖೆ ಪರೀಕ್ಷೆಪಾಸು ಮಾಡಿಲ್ಲ. ಕೆಲವರು 15 ವರ್ಷಗಳ ನಂತರ ಪರೀಕ್ಷೆ ಪಾಸು ಮಾಡಿದ್ದಾರೆ. ಇವರೆಲ್ಲರನ್ನು ಸೇವೆಯಲ್ಲಿ ಮುಂದುವರಿಸಿ, ಕೇವಲ ತೆರಿಗೆ ಪರಿವೀಕ್ಷಕ ಸುನೀಲ್ ಕುಮಾರ್ ಅವರನ್ನು ಮಾತ್ರ ಕೆಲಸದಿಂದ ತೆಗೆದುಹಾಕಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.

ಇಸ್ಕಾನ್‍ಗೆ ಹಣ ಪಾವತಿಸದೆ ಅಧಿಕಾರಿಗಳ ನಿರ್ಲಕ್ಷ್ಯ್ಯ
ಬಡ ವಯೋವೃದ್ಧರ ಅನುಕೂಲಕ್ಕೆ ಇಸ್ಕಾನ್‍ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆ ಅ„ಕಾರಿಗಳ ನಿರ್ಲಕ್ಷ್ಯದಿಂದ ಊಟದ ವ್ಯವಸ್ಥೆಗೆ ತೊಂದರೆಯಾಗಿದೆ. ಇಸ್ಕಾನ್‍ಗೆ ಹಣ ಪಾವತಿಸದೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಕೂಡಲೇ ನಿರ್ಲಕ್ಷ್ಯ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ನಾಮಕರಣಕ್ಕೆ ನಿಯಮ ಅನುಸರಿಸಿ
ರಸ್ತೆ, ವೃತ್ತ, ಮೈದಾನ, ಬಡಾವಣೆ, ಉದ್ಯಾನವನ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಡೆಗಳಿಗೆ ಸಾಧಕರ ಹೆಸರನ್ನು ನಾಮಕರಣ ಮಾಡಬೇಕೆಂದು ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ , ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಹೆಸರು ನಾಮಕರಣ ಮಾಡುವಾಗ, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಏಕಾಏಕಿ ಕೌನ್ಸಿಲ್‍ಸಭೆಯಲ್ಲಿ ಒಪ್ಪಿಗೆ ಪಡೆಯುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com