
ಬೆಂಗಳೂರು: ಸಾರ್ವತ್ರಿಕ ರಜಾ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ (ಜ.14ರಂದು) ನಗರದ ಪ್ರಮುಖ ರಸ್ತೆ ಮತ್ತು ಸ್ಥಳಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದ್ದು, ಸುಗಮ ಸಂಚಾರಕ್ಕೆ
ಅನುವು ಮಾಡುವ ಸಲುವಾಗಿ ಸಂಚಾರ ಪೊಲೀಸರು ಕೆಲ ಕ್ರಮ ಕೈಗೊಂಡಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲ್ವೆ ನಿಲ್ದಾಣ ಮತ್ತು ಈ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಲಿದೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ
ಧನ್ವಂತ್ರಿ ರಸ್ತೆ, ರೈಲ್ವೇ ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ ಫಾರಂ ರಸ್ತೆ ಕಡೆ ಮತ್ತು ಖೋಡೇಸ್ ಜಂಕ್ಷನ್‍ಗಳಲ್ಲಿ ಜ.14 ರಂದು ಎಲ್ಲಾ ರೀತಿಯ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಮೈಸೂರು ರಸ್ತೆ, ಕೊಡಗು ಮತ್ತು ಕೇರಳ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಹೊರಡಲಿವೆ. ತಮಿಳುನಾಡು ಕಡೆಗೆ ಹೊರಡುವ ಬಸ್ಸುಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ. ದಾವಣಗೆರೆ ಕಡೆಗೆ ಹೊರಡುವ ಬಸ್ಸುಗಳು ಚಿಕ್ಕಲಾಲ್ ಬಾಗ್ ಬಸ್ ನಿಲ್ದಾಣದಿಂದ, ಬಹುದೂರ ಕ್ರಮಿಸುವ ಎಲ್ಲಾ ಸಾರಿಗೆ ವಾಹನಗಳ ತಟಸ್ಥ ನಿಲುಗಡೆಯನ್ನು ಬಾಳೇಕಾಯಿಮಂಡಿ, ಜಕ್ಕರಾಯನಕೆರೆ, ಎನ್‍ಜಿಇಎಫ್ ಮತ್ತು ಪೀಣ್ಯ ನೂತನ ಬಸ್ ಟರ್ಮಿನಲ್‍ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಬೆಂಗಳೂರಿನಿಂದ ಹೊರ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಬಿಎಂಟಿಸಿ ಬಸ್ ಮತ್ತು ಆಟೋ ರಿಕ್ಷಾಗಳ ಮೂಲಕ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮತ್ತು ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಸಬೇಕು. ಮೈಸೂರು ಮತ್ತು ಆಚೆಗಿನ ಊರುಗಳ ಪ್ರಯಾಣಕ್ಕೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲೇ ಬಸ್ ಏರಬೇಕು. ಕೆಎಸ್‍ಆರ್‍ಟಿಸಿ, ಎಸ್‍ಇಟಿಸಿ ಪ್ರೀಮಿಯರ್ ಬಸ್‍ಗಳಲ್ಲಿ (ಚೆನ್ನೈ, ತಿರುಚಿ, ಕರೈಕುಡಿ, ಪುಡಿಕೊಟ್ಟೆ, ತಂಜಾವೂರು, ಕೊಯಮ್ಮತ್ತೂರು, ಮದುರೈ ಮತ್ತು ಕುಂಬಕೋಣಂ) ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಸ್ ಹಿಡಿಯಬೇಕು. ಹೊಸೂರು ಮೂಲಕ ಯಲ್ಲಾಪುರಂ, ಧರ್ಮಪುರಿ, ಸೇಲಂ, ಕೃಷ್ಣಗಿರಿ, ಕೊಯಮ್ಮತ್ತೂರು ಕಡೆಗೆ ತಮಿಳುನಾಡು ಬಸ್‍ಗಳಲ್ಲಿ ಪ್ರಯಾಣಿಸಲು ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕು ಎಂದು ಪ್ರಕಟಣೆ ತಿಳಿಸಿದೆ.
Advertisement