
ಬೆಂಗಳೂರು: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಾಸೀರ್ ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಐವರು ಸಾಕ್ಷಿದಾರರಿಗೆ ಜೀವ ಬೆದರಿಕೆ ಇದ್ದು, ಅವರಿಗೆ ಪೊಲೀಸರಿಂದ ರಕ್ಷಣೆ ನೀಡುವಂತೆ ವಿಶೇಷ ಅಭಿಯೋಜಕರು ಕೋರ್ಟ್ ಗೆ ಶನಿವಾರ ಮನವಿ ಮಾಡಿದ್ದಾರೆ.
ಐವರು ಸಾಕ್ಷಿದಾರರು ಕೇರಳದಲ್ಲಿ ವಾಸವಾಗಿದ್ದು, ಅವರಿಗೆ ಮದನಿ ಸಹಚರರಿಂದ ಜೀವ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ಸಾಕ್ಷಿದಾರರಿಗೆ ರಕ್ಷಣೆ ನೀಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ವಿಶೇಷ ಅಭಿಯೋಜಕ ಸೀತಾರಾಮು ಮನವಿ ಮಾಡಿದ್ದಾರೆ.
48ನೇ ಸಿಟಿ ಸಿವಲ್ ಸೆಷನ್ ಕೋರ್ಟ್ ನ್ಯಾ.ಶಿವಣ್ಣ ಅವರ ಪೀಠಕ್ಕೆ ಮನವಿ ಮಾಡಿದ ಅವರು, ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಾಕ್ಷದಾರರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.
ಹೀಗಾಗಿ ಸಾಕ್ಷಿ ಹೇಳಲು ಎಲ್ಲರೂ ಹೆದರುತ್ತಿದ್ದಾರೆ. ಇವರಿಗೆ ರಕ್ಷಣೆ ನೀಡುವ ಅಗತ್ಯವಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಂಧಿತ ಮದನಿ ಸಹಚರ ನಾಸೀರ್, ಪ್ರಮುಖ ಸಾಕ್ಷಿಧಾರ ರಫೀಕ್ ಮತ್ತು ರಾಮಚಂದ್ರನ್ ಎಂಬುವರಿಗೆ ಜೀವ ಬೆದರಿಕೆ ಹಾಕಿದ್ದ.
ಇದನ್ನು ಕೋರ್ಟ್ ಗಮನಕ್ಕೂ ತರಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಸಾಕ್ಷಿದಾರ ರೂಪೇಶ್‍ಗೂ ಬೆದರಿಕೆ ಕೆರೆ ಬಂದಿದೆ. ಸಾಕ್ಷಿ ಹೇಳಲು ಕೋರ್ಟ್‍ಗೆ ಬರುವ ದಿನವೇ ಅವರಿಗೆ ಕರೆ ಬಂದಿದೆ. ಹೀಗಾಗಿ ಕೋರ್ಟ್‍ಗೆ ಬರಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಎಲ್ಲಾ ಸಾಕ್ಷಿದಾರರಿಗೆ ಕೇರಳ ಸರ್ಕಾರವೇ ಭದ್ರತೆ ನೀಡಬೇಕೆಂದು ನಿರ್ದೇಶನ ನೀಡುವಂತೆ ಕೋರ್ಟ್‍ಗೆ ಮನವಿ ಮಾಡಿದ್ದೇನೆ ಎಂದು ಸೀತಾರಾಮು ತಿಳಿಸಿದ್ದಾರೆ.
Advertisement