ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಉಪನ್ಯಾಸಕ!

ವಿದ್ಯಾರ್ಥಿಗಳ ದುಶ್ಚಟಗಳನ್ನು ತಡೆಯಲು ಉಪನ್ಯಾಸಕರು ಹರಸಾಹಸ ಪಡುತ್ತಿರುವುದು ಗೊತ್ತಿರುವ ವಿಷಯವೇ. ಆದರೆ, ಇಲ್ಲೊಬ್ಬ ಉಪನ್ಯಾಸಕನೇ ತಾನು ಮಾಡಿದ ಸಾಲ ತೀರಿಸಲು ಡ್ರಗ್ಸ್ ಸಪ್ಲೈ ಮಾಡುವ ಮೂಲಕ ಗುರು ಶಬ್ದಕ್ಕೆ ಅಪಚಾರ ಬಗೆದಿದ್ದಾನೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಿದ್ಯಾರ್ಥಿಗಳ ದುಶ್ಚಟಗಳನ್ನು ತಡೆಯಲು ಉಪನ್ಯಾಸಕರು ಹರಸಾಹಸ ಪಡುತ್ತಿರುವುದು ಗೊತ್ತಿರುವ ವಿಷಯವೇ. ಆದರೆ, ಇಲ್ಲೊಬ್ಬ ಉಪನ್ಯಾಸಕನೇ ತಾನು ಮಾಡಿದ ಸಾಲ ತೀರಿಸಲು ಡ್ರಗ್ಸ್ ಸಪ್ಲೈ ಮಾಡುವ ಮೂಲಕ ಗುರು ಶಬ್ದಕ್ಕೆ ಅಪಚಾರ ಬಗೆದಿದ್ದಾನೆ.

ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಉಪನ್ಯಾಸಕ ಸೇರಿದಂತೆ ಇನ್ನೋರ್ವ ಆರೋಪಿಯನ್ನು ಸಿಸಿಬಿ ಬಂಧಿಸಿದೆ. ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಐಆರ್‍ಎಂ ಪದವಿ ಕಾಲೇಜಿನಲ್ಲಿ ಗಣಿತ ವಿಭಾಗದ ಉಪನ್ಯಾಸಕನಾಗಿದ್ದ ಜಮೀರ್ ಅಹಮದ್ (47) ಮತ್ತು ಆತನ ಸಹಚರ ಪ್ಯಾರೆಜನ್ (70) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು ರು.7 ಸಾವಿರ ಮೌಲ್ಯದ 320 ಗ್ರಾಂ ಎಫೀಡ್ರೀನ್ ಹಾಗೂ ಮೌಲ್ಯದ 400 ಮಿ.ಲೀ ಕೋಬ್ರಾ ವಿಷ, 2 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಲ ತೀರಿಸೋಕೆ ಅಡ್ಡದಾರಿ: ಸಾಕಷ್ಟು ಸಾಲ ಮಾಡಿಕೊಂಡಿದ್ದ ಅಹಮದ್, ತೀರಿಸುವುದಕ್ಕಾಗಿ ಮಾದಕ ವಸ್ತು ಸರಬರಾಜು ಮಾಡುವ ಅಪಾಯದ ವೃತ್ತಿ ಕಂಡುಕೊಂಡಿದ್ದ. ಮಾದಕ ವಸ್ತುಗಳಿಗೆ ದಾಸರಾಗಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಡ್ರಗ್ಸ್ ಸರಬರಾಜು ಮಾಡಿ ಹಣ ಪಡೆಯುತ್ತಿದ್ದ. ಇದಕ್ಕಾಗಿ ಜಮೀರ್, ಕುಪ್ಪಂಗೆ ಬಂದಿದ್ದ ಅಂತಾರಾಜ್ಯ ಡ್ರಗ್ಸ್ ಮಾಫಿಯಾ ವ್ಯಕ್ತಿಯೊಬ್ಬನಿಂದ ಕಳೆದ ತಿಂಗಳು ಅರ್ಧ ಲೀಟರ್ ಕೋಬ್ರಾ ವಿಷ ಖರೀದಿಸಿದ್ದ. ಅದರೊಂದಿಗೆ ತಿರುಪತಿಯಲ್ಲಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ 322 ಗ್ರಾಂ ಬ್ರೌನ್ ಶುಗರ್ ಖರೀದಿ ಮಾಡಿದ್ದ. ಇದನ್ನು ಬೆಂಗಳೂರಿನ ಡ್ರಗ್ಸ್ ಮಾಫಿಯಾದೊಂದಿಗೆ ಸಂಪರ್ಕ ಹೊಂದಿ ಆಗಾಗ ಬೆಂಗಳೂರಿಗೆ ಬಂದು ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ 3 ಎಂಎಲ್ ಅನ್ನು ರು. 10 ಸಾವಿರ ಮಾರಾಟ ಮಾಡುತ್ತಿದ್ದ.

ಅಂದರೆ ಈ ಮಾರಾಟ ಬೆಲೆಯ ಪ್ರಕಾರ ಅಂದಾಜು ರು.13.3 ಲಕ್ಷ ಮೌಲ್ಯದ ವಿಷವನ್ನು ಮಾರಾಟ ಮಾಡುವುದರಲ್ಲಿ ನಿರತನಾಗಿದ್ದ. ಈತನಿಗೆ ಪ್ಯಾರೆಜಾನ್ ಸಹಾಯ ಮಾಡುತ್ತಿದ್ದ. ಈ ವ್ಯಾಪಾರ ಬಹಳ ದಿನಗಳಿಂದ ನಡೆಯುತ್ತಿತ್ತು. ಇದರ ಬಗ್ಗೆ ಪದೇ ಪದೇ ಪೊಲೀಸ್ ಇಲಾಖೆಗೆ ದೂರುಗಳು ಬಂದಿದ್ದವು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಾಗವಾರ ಸಿಗ್ನಲ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಲಂ 9(ಎ), 25(ಎ) ಎನ್‍ಡಿಪಿಎಸ್ ಕಾಯ್ದೆ 1985ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಹಾವಿನ ವಿಷ ಸೇವನೆ ಕಿಕ್ ಕೊಡಲ್ಲ!
ಹಾವಿನ ವಿಷ ಸೇವನೆ ಮಾಡಿದರೆ ಕಿಕ್ ಬರುತ್ತದೆ ಎಂಬುದು ಸುಳ್ಳು. ಯಾಕೆಂದರೆ ಒಮ್ಮೆ ಹಾವಿನಲ್ಲಿರುವ ವಿಷ ಹೊರ ಬಂದ ಕೆಲವೇ ಕ್ಷಣಗಳಲ್ಲಿ ಅದು ಹರಳುಗಳ ರೂಪ ಪಡೆಯುತ್ತದೆ. ಇದನ್ನು ಸೇವನೆ ಮಾಡಿದರೆ ಯಾವುದೇ ಕಿಕ್ ಏರುವುದಿಲ್ಲ. ಆದರೆ, ಕೆಲವು ಕಿಡಿಗೇಡಿಗಳು ಹಾವಿನ ವಿಷ ಸೇವನೆ ಮಾಡಿದರೆ ಕಿಕ್ ಬರುತ್ತದೆ ಎಂದು ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಅಲ್ಲದೇ ಬ್ರೌನ್ ಶುಗರ್ ಜೊತೆ ಸೇವನೆ ಮಾಡಿದರೆ ನಶೆ ಬರುತ್ತದೆ ಎಂದು ಮಾದಕ ವ್ಯಸನಿಗಳನ್ನು ಮೋಸ ಮಾಡುತ್ತಿದ್ದಾರೆ. ಮಾದಕ ವಸ್ತುಗಳ ವ್ಯಾಪಾರಿಗಳ ಮಾತಿಗೆ ಮರುಳಾಗಿ ಸಾವಿರಾರು ರುಪಾಯಿ ಹಣ ನೀಡಿ, ಖರೀದಿ ಮಾಡುತ್ತಾರೆ ಎನ್ನುತ್ತಾರೆ ವನ್ಯಜೀವಿ ಹೋರಾಟಗಾರ ಶರತ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com