ಬೆಂಗಳೂರು: ಪ್ರೀತಿಯ ವಿಚಾರ ಹೆತ್ತವರಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದು ಸಹೋದರಿಯರಿಬ್ಬರು ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೊಂಗಸಂದ್ರದ ಬಾಲಾಜಿ ಲೇಔಟ್‌ನ ನಿವಾಸಿಗಳಾದ ಮೇಘನಾ (22) ಮತ್ತು ರಂಜಿತಾ (20) ಇಬ್ಬರು ಮನೆಯಲ್ಲಿ ನ ಫ್ಯಾನ್‌ಗೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಮೇಘನಾ, ರಂಜಿತಾ ಇಬ್ಬರು ಪ್ರೀತಿಯ ಮಾಯೆಗೆ ಸಿಲುಕಿದ್ದರು. ಇಬ್ಬರು ಯುವಕರಿಬ್ಬರನ್ನು ಮನಸಾರೆ ಪ್ರೀತಿಸುತ್ತಿದ್ದರು. ಈ ವಿಚಾರ ಹೆತ್ತವರಿಗೆ ತಿಳಿದು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕ-ತಂಗಿ ಇಬ್ಬರು ಮುಂದಿನ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಮಡಿವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.