ನಾಲ್ಕು ತಿಮಿಂಗಿಲಗಳು ಲೋಕಾಯುಕ್ತ ಬಲೆಗೆ
ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಲ್ಲಿ ರಾಜ್ಯದ ನಾಲ್ವರು ಸರ್ಕಾರಿ ನೌಕರರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಎಪಿಸಿ ಶಿವಪ್ಪ ಮಲ್ಲಪ್ಪ ಆಕಳವಾಡಿ, ಕನಕಪುರ ಪಂಚಾಯತ್ ರಾಜ್ ವಿಭಾಗದ ಕಿರಿಯ ಅಭಿಯಂತರ ಚಂದ್ರಶೇಖರಯ್ಯ, ಇದೇ ವಿಭಾಗದ ಕಾರ್ಯದರ್ಶಿ ಬಸಯ್ಯ ನಿಂಗಯ್ಯ ಇಟಗಿಮಠ, ಮಂಗಳೂರು ಮಹಾನಗರ ಪಾಲಿಕೆ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗೊಲಿ ಬಲೆಗೆ ಬಿದ್ದ ಸರ್ಕಾರಿ ನೌಕರರು. ಬೆಂಗಳೂರು, ಮೈಸೂರು, ಬಾಗಲಕೋಟೆ, ಗದಗ, ಕನಕಪುರ, ಬಿಜಾಪುರದ ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು ಈ ವೇಳೆ ಕೊಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗೊಲಿ ಅವರು ಬಿಜಾಪುರದಲ್ಲಿ ರು. 25 ಲಕ್ಷ ಮೌಲ್ಯದ ಮನೆ, ರು. 4.5 ಲಕ್ಷ ಮೌಲ್ಯದ 3 ಸೈಟ್, ಮಂಗಳೂರಿನಲ್ಲಿ ರು. 9 ಲಕ್ಷ ಬೆಲೆಯ ಮನೆ, ತಂದೆಯ ಹೆಸರಿನಲ್ಲಿ ಮಂಗಳೂರಿನಲ್ಲಿ ರು. 14 ಲಕ್ಷದ ಮನೆ, ರು. 18 ಲಕ್ಷ ಬೆಲೆಯ 896 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಪೋಷಕರ ಹೆಸರಿನಲ್ಲಿ ಬ್ಯಾಂಕಿನಲ್ಲಿ ರು. 49 ಲಕ್ಷ ನಗದು, ಮಾರುತಿ ಸ್ವಿಫ್ಟ್ ಕಾರು ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ.
ಬಾಗಲಕೋಟೆ ಎಪಿಸಿ ಶಿವಪ್ಪ ಅವರಿಗೆ ಸೇರಿದ ನಿರಾಳಕೇರಿ ಗ್ರಾಮದಲ್ಲಿರುವ 5 ಎಕರೆ ಜಮೀನು ಹಾಗೂ ಅದರಲ್ಲಿ ನಿರ್ಮಿಸಿರುವ ಮನೆಯ ಅಂದಾಜು ಮೌಲ್ಯ ಸುಮಾರು ರು. 10 ಲಕ್ಷ. ವೀರಾಪುರದಲ್ಲಿ 2 ಫ್ಲಾಟ್ಗಳು 14 ಲಕ್ಷ್ಯದ ಜಮೀನುಗಳು, ರಾಮಪುರ ಗ್ರಾಮದಲ್ಲಿ ರು. 10 ಲಕ್ಷ ಬೆಲೆಯ ಒಂದು ಮನೆ ಸೇರಿ ಒಟ್ಟು ರು. 49 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ ರು. 3.90 ಲಕ್ಷ ನಗದು, 313 ಗ್ರಾಂ ಚಿನ್ನ, ಇಂಡಿಕಾ ಕಾರು, ಟ್ರ್ಯಾಕ್ಟರ್, ಗೂಡ್ಸ್ ಆಟೋ, ಐದು ದ್ವಿಚಕ್ರ ವಾಹನಗಳು, 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ಮೌಲ್ಯ ರು. 24.41 ಲಕ್ಷ. 1999ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಶಿವಪ್ಪ ಅವರು 2003ರಿಂದ 2010ರ ವರೆಗೆ ಬಾಗಲಕೋಟೆ ಲೋಕಾಯುಕ್ತ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಕನಕಪುರ ಪಂಚಾಯತ್ರಾಜ್ ವಿಭಾಗದಲ್ಲಿ ಕಿರಿಯ ಅಭಿಯಂತರ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರಯ್ಯ ಅವರು ಬೆಂಗಳೂರಿನ ಆರ್ಪಿಸಿ ಬಡಾವಣೆಯಲ್ಲಿ ರು. 40 ಲಕ್ಷ ಬೆಲೆಯ ಮೂರು ಮಹಡಿಯ ಮನೆ ಹೊಂದಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ರು. 3.5 ಲಕ್ಷದ ಸೈಟ್, ಬೆಂಗಳೂರು ಪೂರ್ವ ತಾಲೂಕು ಕಣ್ಣೂರು ಗ್ರಾಮದಲ್ಲಿ 4.32 ಲಕ್ಷದ ಸೈಟ್, ಮಳವಳ್ಳಿಯಲ್ಲಿ ರು. 3 ಲಕ್ಷ ಬೆಲೆಯ 6 ಎಕರೆ ಕೃಷಿ ಭೂಮಿ. ಅಲ್ಲದೇ ರು. 26 ಲಕ್ಷ ಬೆಲೆಬಾಳುವ 980 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ, ಸ್ಯಾಂಟ್ರೋ ಕಾರು ಹಾಗೂ ಇತರ ಆಸ್ತಿ ಪತ್ತೆಯಾಗಿದೆ. ಕನಕಪುರ ಪಂಚಾಯತ್ರಾಜ್ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಸಯ್ಯ ಅವರು ಗದಗ ತಾಲೂಕು ಕಳಸಾಪುರ ಗ್ರಾಮದ ವ್ಯಾಪ್ತಿ 7 ಕಡೆ ಆಸ್ತಿ ಖರೀದಿಸಿದ್ದು ಅದರ ಮೌಲ್ಯ ರು. 22 ಲಕ್ಷ. ಸಂಬಂಧಿಕರ ಹೆಸರಿನಲ್ಲಿ ಸುಮಾರು ರು. 11 ಲಕ್ಷ ಮೌಲ್ಯದ ಜಮೀನು ಸೇರಿ ಒಟ್ಟು ಸುಮಾರು ರು. 50 ಲಕ್ಷದಷ್ಟು ಆಸ್ತಿ ಪತ್ತೆಯಾಗಿದೆ. ದಾಳಿಗೊಳಗಾದ ನಾಲ್ವರು ನೌಕರರ ಬಳಿ ಪತ್ತೆಯಾದ ದಾಖಲೆಗಳು ಹಾಗೂ ಇತರ ವಸ್ತುಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮೌಲ್ಯಮಾಪನ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

