ಬೆಂಗಳೂರು ನಗರ

ಪ್ಲಾಟ್ಫಾರ್ಮ್ ಟಿಕೆಟ್ ಯಂತ್ರಗಳು ಫ್ಲಾಟ್!

Published On :

ಬೆಂಗಳೂರು: ಪ್ರಯಾಣಿಕರೇ ಗಮನಿಸಿ!
ನೀವು ಹುಡುಕುತ್ತಿರುವ ಪ್ಲಾಟ್ಫಾರ್ಮ್ ಟಿಕೆಟ್ ಯಂತ್ರಗಳು ಕೆಲವೇ ವರ್ಷಗಳಲ್ಲಿ ಕೆಂಪೇಗೌಡ ರೇಲ್ವೆ  ನಿಲ್ದಾಣಕ್ಕೆ  ಬರಲಿವೆ. ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ!
ಹೀಗೆಂದು ನಗರದ ರೇಲ್ವೆ ನಿಲ್ದಾಣದಲ್ಲಿ ಯಾರೂ ಉದ್ಘೋಷಿಸುವುದಿಲ್ಲ. ಬದಲಾಗಿ ಪ್ಲಾಟ್ಫಾರ್ಮ್ ಟಿಕೆಟ್ ಖರೀದಿಗೆ ಮುಂದಾದರೆ ಇದರ ಅನುಭವವಾಗುತ್ತದೆ. ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಖರೀದಿಸಲು ಭಾರೀ ಕಸರತ್ತು ನಡೆಸಬೇಕು. ಟಿಕೆಟ್ ಕಾದರೆ ಸಮಯ ದಂಡ. ಟಿಕೆಟ್ ಇಲ್ಲದೇ ಒಳ ಹೋದರೂ ದಂಡ ಖಚಿತ! ನಂತರ 'ಮತ್ತೆ ಹೀಗೆ ಮಾಡಬೇಡಿ' ಎಂಬ ಸಲಹೆ ಉಚಿತ.
ಹೀಗೆ ಪ್ಲಾಟ್ಫಾರ್ಮ್ ಟಿಕೇಟ್ ಸಿಗದೆ ದಿನ 150ಕ್ಕೂ ಹೆಚ್ಚು ಮಂದಿ ದಂಡ ಪಾವತಿಸುತ್ತಿರುತ್ತಾರೆ.
ಕನಿಷ್ಠ ರು. 250ರಿಂದ ರು. 1000 ವರೆಗೂ ದಂಡ ಪಾವತಿಸಿ ಛೇ! ಎಂದು ಕೈ ಹಿಸುಕಿಕೊಂಡು ಹೋಗುತ್ತಿರುತ್ತಾರೆ.
ಇಂಥವರು ಅಧಿಕಾರಿಗಳನ್ನು ಕೇಳಿದರೆ, ಪ್ಲಾಟ್ಫಾರ್ಮ್ ಟಿಕೆಟ್ ನೀಡುವ ಯಂತ್ರಗಳು ಹಾಳಾಗಿವೆ. ಸದ್ಯದಲ್ಲೇ ಹೊಸ ಯಂತ್ರಗಳು ಬರುತ್ತವೆ. ಆದ್ದರಿಂದ ಎಲ್ಲಾ ಕೌಂಟರ್ಗಳಲ್ಲೂ ಟಿಕೆಟ್ ಸಿಗುವಂತೆ ಮಾಡಿದ್ದೇವೆ. ಹೊರಗೆ ಟೆಲಿಫೋನ್ ಭೂತ್ಗಳಲ್ಲೂ ದೂರೆಯುವಂತೆ ಮಾಡಿದ್ದೇವೆ. ಖರೀದಿಸಿ ಎಂದು ಹೇಳುತ್ತಾರೆ.
ಅದನ್ನು ನಂಬಿ ಪ್ಲಾಟ್ಫಾರ್ಮ್ ಟಿಕೆಟ್ಗಾಗಿ ಜನ ಸಾಮಾನ್ಯ ಕೌಂಟರ್ಗಳಲ್ಲಿ ತಾಸುಗಟ್ಟಲೆ ಸರದಿಯಲ್ಲಿ ನಿಂತವರಿಗೆ ಪ್ಲಾಟ್ಫಾರ್ಮ್ ಟಿಕೆಟ್ ಸಿಕ್ಕರೂ ಪ್ರಯೋಜವಾಗುವುದಿಲ್ಲ.
ಏಕೆಂದರೆ, ಬಹುದೊಡ್ಡ ಸಾಲಿನ ಸರದಿಯಲ್ಲಿ ಟಿಕೆಟ್ ಖರೀದಿಸಿ ಹೋಗುವ ವೇಳೆಗೆ ಅವರು ಪ್ರಯಾಣಿಕರನ್ನು ಹುಡುಕಬೇಕಿರುವ ರೈಲು ಹೋಗಿರುತ್ತದೆ. ನಿಲ್ದಾಣದಲ್ಲಿಳಿದ ಪ್ರಯಾಣಿಕರೂ ಮನೆಯತ್ತ ಹೋಗಿರುತ್ತಾರೆ.

ಸಿಬ್ಬಂದಿಯೇ ನಾಪತ್ತೆ
ವ್ಯವಸ್ಥೆ ಸುಧಾರಿಸಿತು ಎಂದು ಪ್ರಯಾಣಿಕರ ಟಿಕೇಟ್ ಕೌಂಟರ್ ಜತೆ ತೆರೆದಿದ್ದ ಕೌಂಟರ್ ಮುಚ್ಚಲಾಯಿತು. ಆಗ ನಿರ್ವಹಣೆ ಕೊರತೆಯಿಂದ ಯಂತ್ರಗಳು ಕೆಟ್ಟು ನಿಂತವು. ಕೆಲವೇ ದಿನಗಳಲ್ಲಿ ಅವು ಸತ್ತು ಹಳೇ ವಸ್ತುಗಳ ಕೊಠಡಿ ಸೇರದವು. ಇದರಿಂದ ಸಹಜವಾಗಿಯೇ ಪ್ಲಾಟ್ಫಾರ್ಮ್ ಟಿಕೆಟ್ ಪರದಾಟ ಇನ್ನೂ ಹೆಚ್ಚಾಗಿತ್ತು. ಈ ಬಗ್ಗೆ ದೂರುಗಳೂ ಹೆಚ್ಚಿತ್ತು. ಆದರೆ, ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಕೊಠಡಿಯೊಂದರಲ್ಲಿ ಸಿಬ್ಬಂದಿ ಕೂರಿಸಿ ಪ್ಲಾಟ್ಫಾರ್ಮ್ ಟಿಕೆಟ್ ಕೌಂಟರ್ ಆರಂಭಿಸಿದ್ದಾರೆ. ಅಂದರೆ, ಇಡೀ ನಿಲ್ದಾಣಕ್ಕೆ ಬರುವ ಲಕ್ಷಾಂತರ ಪ್ರಯಾಣಿಕರ ಸಹವರ್ತಿಗಳು ಈ ಏಕೈಕ ಕೌಂಟರ್ನಲ್ಲೇ ಖರೀದಿಸುವ ಅವ್ಯವಸ್ಥೆ ಸೃಷ್ಟಿಸಿದ್ದಾರೆ. ಅಷ್ಟೇ ಏಕೆ, ಈ ಏಕೈಕ ಕೌಂಟರ್ನ ಸಿಬ್ಬಂದಿ ಪ್ರತಿ ಅರ್ಧ ತಾಸಿಗೊಮ್ಮೆ ನಾಪತ್ತೆಯಾಗುತ್ತಾರೆ. ಆಗ ಪ್ಲಾಟ್ಫಾರ್ಮ್ ಟಿಕೇಟ್ಗಾಗಿ ಜನ ಪರದಾಡುತ್ತಾರೆ. ಅನಿವಾರ್ಯವಾಗಿ ಕೆಲವರು ನಿಲ್ದಾಣ ಹೊಕ್ಕುತ್ತಾರೆ. ಇಂಥವರನ್ನೇ ಕಾಯುತ್ತಿರುವ ರೈಲ್ವೆ ಅಧಿಕಾರಿಗಳು ಗಬಕ್ಕನೆ ಹಿಡಿದು ಸ್ಥಳದಲ್ಲೇ 300 ದಂಡ ವಿಧಿಸುತ್ತಾರೆ.

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.