ಬೆಂಗಳೂರು: ರಷ್ಯಾದ ಕಾಜನ್‌ನಲ್ಲಿ ಜು.6ರಿಂದ 18 ರವರೆಗೆ ನಡೆಯಲಿರುವ ವಿಶ್ವ ವಿದ್ಯಾಲಯಗಳ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರು ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕೆ.ಅರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಬಿ. ಚೇತನ್(ಎತ್ತರ ಜಿಗಿತ) ಪ್ರೆಸಿಡೆನ್ಸಿ ಕಾಲೇಜಿನ ರೋಹಿತ್ ಆರ್.ಹವಲ್ದಾರ್(ಈಜು ಸ್ಪರ್ಧೆ) ಸ್ಪರ್ಧೆಯಲ್ಲಿ ಸ್ಪರ್ಧಿಸಲಿರುವ ವಿದ್ಯಾರ್ಥಿಗಳು.
ಈ ಇಬ್ಬರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳಲಿ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ಶುಭ ಹಾರೈಸಿದರು.
ವಿದ್ಯಾರ್ಥಿಗಳು ಬಹುಮಾನ ಪಡೆಯುವುದು ಮುಖ್ಯವಲ್ಲ. ಇಂತಹ ದೊಡ್ಡ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ದೊಡ್ಡ ವಿಷಯ. ಇದರಿಂದ ನಮ್ಮ ವಿಶ್ವವಿದ್ಯಾಲಯದ ಘನತೆ ಹೆಚ್ಚಲಿದೆ. ಇವರ ಖರ್ಚು-ವೆಚ್ಚಕ್ಕಾಗಿ ಬೆಂಗಳೂರು ವಿವಿ 3,21,490 ನೀಡುತ್ತಿದೆ. ರೋಹಿತ್ ಮೊದಲು ಕೊಲ್ಕತ್ತಾ ಕಲ್ಯಾಣಿ ವಿಶ್ವವಿದ್ಯಾಲಕ್ಕೆ ಹೋಗಿ ಈಜು ತರಬೇತಿ ಪಡೆದುಕೊಳ್ಳಲಿದ್ದು, ಬಿ. ಚೇತನ್ ಅವರು ಹೈದರಬಾದ್‌ನಲ್ಲಿರುವ ಗಚ್ಚಿಬೋಲಿ ಸ್ಪೇಡಿಯಂ ಹೋಗಿ ತರಬೇತಿ ಪಡೆಯಲಿದ್ದಾರೆ ಎಂದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಆರ್. ಮುನಿರೆಡ್ಡಿ ಮಾತನಾಡಿ, ಕಳೆದ ವರ್ಷ ಸಹ ಬೆಂಗಳೂರು ವಿವಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಲು ತಗಲುವ ವೆಚ್ಚವನ್ನು ದೆಹಲಿಯಲ್ಲಿರುವ ಭಾರತ ವಿಶ್ವವಿದ್ಯಾಲಯಗಳ ಮಂಡಳಿ ನೀಡಬೇಕು. ಆದರೆ, ಹಣ ಬಿಡುಗಡೆ ಮಾಡುವುದು ತಡವಾಗುವುದರಿಂದ ವಿಶ್ವವಿದ್ಯಾಲಯವೇ ವೆಚ್ಚ ಭರಿಸಲಿದೆ ಎಂದರು.
ನನಗೆ ಸಂತೋಷವಾಗಿದೆ: ನಾನು ಪ್ರತಿ ನಿತ್ಯ ಸುಮಾರು ಮೂರು ಗಂಟೆಗಳ ಕಾಲ ತರಬೇತಿಯಲ್ಲಿ ತೊಡಗುತ್ತಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವಿವಿ ಧನ ಸಹಾಯ ಮಾಡಿರುವುದು ಖುಷಿ ತಂದಿದೆ. ಈ ಬಾರಿ ಸ್ಪರ್ಧಿಸಿ ಭಾರತಕ್ಕೆ ಚಿನ್ನದ ಪದಕ ತರಬೇಕು ಎಂದುಕೊಂಡಿದ್ದೇನೆ ಎಂದು ಬಿ. ಚೇತನ್ ತಮ್ಮ ಹರ್ಷ ವ್ಯಕ್ತಪಡಿಸಿದರು.