ಬೆಂಗಳೂರು: ನೀರು ತುಂಬಿದ್ದ ಕಲ್ಲಿನ ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಕೂಡ್ಲು ಬಳಿ ಶುಕ್ರವಾರ ನಡೆದಿದೆ.
ಕೂಡ್ಲು ನಿವಾಸಿಗಳಾದ ಮೇಘನಾ (13), ಐಶ್ವರ್ಯಾ (13) ಹಾಗೂ ಲೋಕೇಶ್ (14) ಮೃತ ದುರ್ದೈವಿಗಳು. ಮಕ್ಕಳು ಆಟವಾಡಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಮಕ್ಕಳು ನೀರಿನಲ್ಲಿ ಮುಳುಗಿದ್ದನ್ನು ಕಂಡ ಐಶ್ವರ್ಯಾಳ ಸಹೋದರಿ ಸಾಂಘವಿ(16) ಸ್ಥಳೀಯರಿಗೆ ವಿಷಯ ತಿಳಿಸಿದಳು.
ತಕ್ಷಣ ಅಲ್ಲಿಗೆ ಬಂದ ಸ್ಥಳೀಯರು ಇಬ್ಬರು ಬಾಲಕಿಯರನ್ನು ಮೇಲೆತ್ತಿ, ಆಸ್ಪತ್ರೆಗೆ ಸಾಗಿಸಿದರು. ಪರಿಶೀಲಿಸಿದ ವೈದ್ಯರು ಮಕ್ಕಳು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರೂ ಬಾಲಕನ ಮೃತದೇಹ ಪತ್ತೆಯಾಗಲಿಲ್ಲ. ನಂತರ ಕಾರ್ಯಾಚರಣೆ ಕೈಬಿಟ್ಟು, ಶನಿವಾರ ಮುಂದುವರಿಸಲು ನಿರ್ಧರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಈ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಬಂಡೆ ಹೊಡೆಯುವ ಕೆಲಸ ನಡೆಯುತ್ತಿತ್ತು. ಆಗಿನಿಂದಲೂ ಕಲ್ಲು ಕ್ವಾರಿ ಇದೆ. ಆದರೆ, ಇದರ ಸುತ್ತ ತಂತಿ ಹಾಕಿಲ್ಲ. ಕೊನೆಪಕ್ಷ ಮಣ್ಣು ಹಾಕಿ ಮುಚ್ಚಿಲ್ಲ.ಹಾಗಾಗಿ ಮಕ್ಕಳು ಇಲ್ಲಿಗೆ ಈಜಲು ಬರುತ್ತಾರೆ ಎಂದು ತಿಳಿಸಿದ್ದಾರೆ.