ಬೆಂಗಳೂರು: ಎಟಿಎಂ ಕೇಂದ್ರದಲ್ಲಿ ಹಲ್ಲೆಗೊಳಗಾಗಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದೆ.
ಶುಕ್ರವಾರ ಜ್ಯೋತಿ ಅವರನ್ನು ಬೆಡ್ ಮೇಲೆ ಕೂರಿಸಿ ವ್ಯಾಯಾಮ ಮಾಡಿಸಲಾಗಿದೆ. ಸಣ್ಣ ಪ್ರಮಾಣದ ವ್ಯಾಯಾಮ ಮಾಡಿರುವ ಜ್ಯೋತಿ ಅವರಿಗೆ ಇನ್ನು ಓಡಾಡಲು ಆಗುತ್ತಿಲ್ಲ. ಹಂತ ಹಂತವಾಗಿ ಜ್ಯೋತಿ ಅವರಿಗೆ ಮಾಡಿಸುವ ವ್ಯಾಯಾಮಗಳನ್ನು ಬದಲಿಸಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅವರ ಬಲಗೈ ಹಾಗೂ ಬಲಗಾಲಿಗೆ ಪಾರ್ಶ್ವವಾಯುವಾಗಿದ್ದು ಹಾಗೇ ಇದೆ ಎಂದು ನ್ಯೂರಾಲಜಿಸ್ಟ್ ಡಾ.ವೆಂಕಟರಮಣ ತಿಳಿಸಿದ್ದಾರೆ.
ಜ್ಯೋತಿ ಪತಿ ಉದಯ್ ಅವರು ಎರಡು ಬಾರಿ ಪತ್ನಿಯೊಂದಿಗೆ ಮಾತನಾಡಿ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಇದೇ ವೇಳೆ ಶುಕ್ರವಾರ ಇವರ ಮಗಳು ಆತ್ಮಿಕ ಹುಟ್ಟು ಹಬ್ಬವಿತ್ತು. ಆದರೆ ಜ್ಯೋತಿ ಆಸ್ಪತ್ರೆಯಲ್ಲಿರುವ ಕಾರಣ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಐಸಿಯುನಲ್ಲಿ ಮೊಬೈಲ್ ಫೋನ್ಗೆ ಅವಕಾಶ ಇಲ್ಲದ ಕಾರಣ ಮಗಳ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲು ಆಗಿಲ್ಲ. ಮಗಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಲಾಗಿದೆ. ಅಲ್ಲಿ ಇತರ ಮಕ್ಕಳೊಂದಿಗೆ ಮಗಳು ಆಟವಾಡುತ್ತಿದ್ದಾಳೆ ಎಂದು ಉದಯ್ ಕುಮಾರ್ ತಿಳಿಸಿದರು. ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ಪೊರೇಷನ್ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಜ್ಯೋತಿ ಆರೋಗ್ಯ ವಿಚಾರಿಸಿದರು. ಚಿಕಿತ್ಸೆಯ ವೆಚ್ಚವನ್ನು ಬ್ಯಾಂಕ್ ಭರಿಸಲಿದೆ ಎಂದು ಹೇಳಿದರು.
ಪಾತಕಿ ತಿಪಟೂರಲ್ಲಿ ಸಿಕ್ಕ ವದಂತಿ
ಜ್ಯೋತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ ಎನ್ನುವ ಸುದ್ಧಿ ಶುಕ್ರವಾರ ನಗರದಾದ್ಯಂತ ಹಬ್ಬಿತ್ತು. ತಿಪಟೂರಿನಲ್ಲಿ ವಾಸವಿದ್ದ ಸತೀಶ್ ಗುಬ್ಬಿ ತಾಲೂಕಿನ ನಿಟ್ಟೂರಿನವನು. ಈತ ಬೆಂಗಳೂರಿನ ಐಟಿಸಿ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್. 2 ವರ್ಷದ ಹಿಂದೆ ತಿಪಟೂರಿನ ಹುಡುಗಿಯನ್ನು ಸತೀಶ್ ಮದುವೆಯಾಗಿದ್ದ. ಮದುವೆಯಾದ ವರ್ಷದಲ್ಲೇ ಆತನ ಹೆಂಡತಿ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಸತೀಶ್ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಶುಕ್ರವಾರ ಕೋರ್ಟ್ನಲ್ಲಿ ವಿಚಾರಣೆ ಇದ್ದ ಕಾರಣ ಸತೀಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜ್ಯೋತಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಯ ಹೋಲಿಕೆಯನ್ನು ಸತೀಶ್ ಹೋಲುತ್ತಿದ್ದನೆಂದು ಬೆಂಗಳೂರಿನಿಂದ ಸಿಸಿಬಿ ಪೊಲೀಸರು ತಿಪಟೂರಿನ ನ್ಯಾಯಾಲಯದ ಬಳಿ ವಶಕ್ಕೆ ತೆಗೆದುಕೊಂಡು ನಗರ ಠಾಣೆಯಲ್ಲಿ ವಿಚಾರಣೆ ನಡೆಸಿದರು. ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ. ಆದರೆ, ಪೊಲೀಸ್ ಮೂಲಗಳು ಮಾತ್ರ ಈ ಬಗ್ಗೆ ಖಚಿತಪಡಿಸಿಲ್ಲ.