ಬೆಂಗಳೂರು: ತನ್ನ ಪ್ರಿಯಕರನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಷಯ ತಿಳಿದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರದ ಮಂತ್ರಿ ಮಾಲ್ನಲ್ಲಿ ನಡೆದಿದೆ.
ಲಗ್ಗೆರೆ ನಿವಾಸಿ ಶೇಖರ್ ಎಂಬುವರ ಪುತ್ರಿ ಎಚ್.ಎಸ್.ಅನ್ನಪೂರ್ಣ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಂತ್ರಿ ಮಾಲ್ನ ಸುಗಂಧದ್ರವ್ಯ ಮಳಿಗೆಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ಅದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತನನ್ನು ಕಳೆದ 8 ತಿಂಗಳಿಂದ ಪ್ರೀತಿಸುತ್ತಿದ್ದಳು. ಕೆಲ ದಿನಗಳಿಂದ ಮದುವೆಯಾಗುವಂತೆ ಕುಮಾರ್ ಬಳಿ ಕೇಳಿಕೊಂಡಿದ್ದಳು. ಆದರೆ ಕುಮಾರ್ ಮದುವೆ ನಿರಾಕರಿಸುತ್ತಾ ಬಂದಿದ್ದ. ಕುಮಾರ್ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಷಯ ಇತ್ತೀಚೆಗೆ ಅನ್ನಪೂರ್ಣಗೆ ಗೊತ್ತಾಗಿತ್ತು. ಈ ಕಾರಣದಿಂದ ನೊಂದ ಅನ್ನಪೂರ್ಣ ಮಂಗಳವಾರ ಮಧ್ಯಾಹ್ನ ಕೆಲಸಕ್ಕೆ ಬರುವಾಗ ಕೀಟನಾಶಕ ತಂದು ಮಳಿಗೆಯೊಳಗೆ ಸೇವಿಸಿದ್ದಾಳೆ. ಗಾಬರಿಗೊಂಡ ಕುಮಾರ್ ಹಾಗೂ ಮಳಿಗೆ ಸಿಬ್ಬಂದಿ ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅನ್ನಪೂರ್ಣ ಮೃತಪಟ್ಟಿದ್ದಾಳೆ.
ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕುಮಾರ್ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಆರೋಪಿ ಕುಮಾರ್ ಪರಾರಿಯಾಗಿದ್ದಾನೆ. ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡುವ ಶೇಖರ್ ಎಂಬುವವರ ಮೂರನೇ ಮಗಳಾಗಿರುವ ಅನ್ನಪೂರ್ಣ ಐಟಿಐ ವ್ಯಾಸಂಗ ಮಾಡಿ ಒಂದೂವರೆ ವರ್ಷದ ಹಿಂದೆ ಮಂತ್ರಿ ಮಾಲ್ನಲ್ಲಿ ಕೆಲಸಕ್ಕೆ ಸೇರಿದ್ದಳು.