ನೀತಿ ಸಂಹಿತೆ: ಮಾಹಿತಿ ಸಲ್ಲಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 7
ವಿಧಾನಸಭಾ ಚುನಾವಣಾ ನೀತಿ ಸಂಹಿತೆಯನ್ನು ಪರಿಣಾಮಕಾರಿ ಜಾರಿಗೊಳಿಸಲು ಗ್ರಾಮ ಮಟ್ಟದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಬೇಕು. ಅವುಗಳನ್ನು ನಿತ್ಯ ಸಂಜೆ 6ರೊಳಗೆ ಗ್ರಾಪಂ ಮಟ್ಟದ ನೀತಿ ಸಂಹಿತೆ ಅನುಷ್ಠಾನ ತಂಡಗಳಿಗೆ ಸಲ್ಲಿಸಬೇಕೆಂದು ಆಯಾ ಪಿಡಿಓಗಳು ಕ್ರಮ ಕೈಗೊಳ್ಳುವಂತೆ ಡಿಸಿ ಎ.ಎ. ಬಿಸ್ವಾಸ್ ಸೂಚಿಸಿದ್ದಾರೆ.
ಗ್ರಾಮ ಮಟ್ಟದ ಮಾಹಿತಿ ಸಂಗ್ರಹಣೆಗೆ ಅಂಗನವಾಡಿ ಕಾರ್ಯಕರ್ತಯೆರ ಜೊತೆಗೆ ಬಿಎಲ್ಓ, ಬಾಲಕಾರ್ಮಿಕರ ಕಲ್ಯಾಣ ತಂಡಗಳು, ಜಿಐಜೆಡ್ ಕಾರ್ಯಕರ್ತರು, ಟೂರಿಸ್ಟ್ ಗೈಡ್ಗಳು ಸಹಕರಿಸಬೇಕು. ಗ್ರಾಪಂ ಕಂಪ್ಯೂಟರ್ ಆಪರೇಟರ್ಗಳು ಮಾಹಿತಿಯನ್ನು ಎಕ್ಸೆಲ್ ಷೀಟ್ಗಳಲ್ಲಿ ಕ್ರಮಬದ್ಧವಾಗಿ ಸಂಗ್ರಹಿಸಬೇಕು.
ಗ್ರಾಮ ಮಟ್ಟದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಸಂಬಂಧಿಸಿದ ಗ್ರಾಪಂ ಮಟ್ಟದ ನೀತಿ ಸಂಹಿತೆ ಅನುಷ್ಠಾನ ತಂಡಗಳಿಗೆ ಸಂಜೆ 6ರೊಳಗೆ ಸಲ್ಲಿಸಬೇಕು. ಗ್ರಾಪಂ ಮಟ್ಟದಲ್ಲಿ ಸ್ವೀಕರಿಸಿದ ಮಾಹಿತಿಯನ್ನು ಎಕ್ಸೆಲ್ ನಮೂನೆಯಲ್ಲಿ ವರದಿವಾರು ಮತ್ತು ಗ್ರಾಪಂ ಮಟ್ಟದ ವರದಿಯನ್ನು ಸಂಯೋಜನೆ (ಕನ್ಸಾಲಿಡೇಟ್)ಮಾಡಿ ಹೋಬಳಿ ಮಟ್ಟದಲ್ಲಿರುವ ಗ್ರಾಪಂ ಕಚೇರಿಗೆ ಇಮೇಲ್ ಮೂಲಕ ಕಳಿಸಬೇಕು. ಹೂಬಳಿ ಮಟ್ಟದ ತಂಡವು ಗ್ರಾಪಂದಿಂದ ಸ್ವೀಕರಿಸಿದ ಮಾಹಿತಿಯನ್ನು ಎಕ್ಸೆಲ್ಷೀಟ್ನಲ್ಲಿ ಕನ್ಸಾಲಿಟೇಡ್ ಮಾಡಿ ಇಮೇಲ್ ಮುಖಾಂತರ ವಿಧಾನಸಭಾ ಕ್ಷೇತ್ರ (ಎ.ಸಿ. ಮಟ್ಟ) ಎಂಸಿಸಿ ತಂಡಕ್ಕೆ ಸಲ್ಲಿಸಬೇಕು. ಹೋಬಳಿ ಮಟ್ಟದ ತಂಡವು ಹೋಬಳಿ ಕೇಂದ್ರಸ್ಥಾನದ ಗ್ರಾಪಂ, ತಾಲೂಕು ಕಚೇರಿಯಲ್ಲಿ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಎಸಿ ಮಟ್ಟದ ಎಂಸಿಸಿ ತಂಡವು ಮಾಹಿತಿಯನ್ನು ಅಪ್ಡೇಟ್ ಮಾಡಿ ಜಿಲ್ಲಾ ತಂಡಕ್ಕೆ ಕಳಿಸಬೇಕೆಂದು ಸೂಚಿಸಿದ್ದಾರೆ.
ನೌಕರರಿಗೆ ರಜೆ ಇಲ್ಲ
ಕಂಪ್ಯೂಟರ್ ಆಪರೇಟರ್ಗಳು ತಮ್ಮ ಕೇಂದ್ರಸ್ಥಾನದಲ್ಲಿನ ಗ್ರಾಪಂ ಕಚೇರಿಗೆ ಹಾಜರಾಗಿ ಸಂಜೆ 5.30ರಿಂದ ಎಲ್ಲ ಗ್ರಾಪಂಗಳ ಮಾಹಿತಿ ಬರುವವರೆಗೂ ಇದ್ದು, ಅದನ್ನು ಅಪ್ಡೇಟ್ ಮಾಡಿ ಚುನಾವಣೆ ಕ್ಷೇತ್ರ ಮಟ್ಟದ ತಂಡಕ್ಕೆ ಇಮೇಲ್ ಮಾಡಬೇಕೆಂದು ಡಿಸಿ ಸೂಚಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣಾ ಸಮಯದಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಚುನಾವಣೆ ಮುಗಿಯುವ ವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿಗೆ ರಜೆ ಮಂಜೂರು ಮಾಡುವುದಿಲ್ಲ. ಅವಶ್ಯವಿರುವ ಸಂದರ್ಭದಲ್ಲಿ ಮಾತ್ರ ಲಿಖಿತ ರೂಪದಲ್ಲಿ ಖುದ್ದಾಗಿ ರಜೆ ಮಂಜೂರು ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ಏರಿಯಾ ಆಫ್ ಆಕ್ಟಿವಿಟಿ ಆಂಡ್ ಕೀ ಆಕ್ಷನ್ಗಾಗಿ ತಂಡಗಳನ್ನು ರಚಿಸಿದ್ದು, ಸದರಿ ತಂಡಕ್ಕೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿ ನಿಗದಿತ ಅವಧಿಯೊಳಗೆ ಕರ್ತವ್ಯಗಳನ್ನು ನಿರ್ವಹಿಸಲು ಸೂಚಿಸಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಎಂಸಿಸಿ ತಂಡ, ಅಬಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ, ವಿಮ್ಸ್ ಸಿಬ್ಬಂದಿಗೆ ನೇರ, ಪರೋಕ್ಷವಾಗಿ ಚುನಾವಣೆ ಕೆಲಸಗಳನ್ನು ನಿರ್ವಹಿಸಲು ಸೂಚಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಕೂಡ ತಮ್ಮ ಶಾಖೆಯ ಕೆಲಸಗಳೊಂದಿಗೆ ಚುನಾವಣಾ ಕೆಲಸಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಲೋಪದೋಷವಾದರೆ ಕಠಿಣ ಕ್ರಮ
ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕರ ವಸೂಲಿಗಾರರು, ಗ್ರಾಮ ಸಹಾಯಕರು, ಸೆಕ್ಟರೋಲ್ ಅಧಿಕಾರಿ, ಎನ್ಐಸಿ, ಯುಎಲ್ಬಿ, ಬಿಎಲ್ಓ ಸಿಬ್ಬಂದಿ ಹಾಗೂ ಅವರ ಅಧೀನ ಡಿ ದರ್ಜೆ ನೌಕರರು ಚುನಾವಣೆ ಮುಗಿಯುವವರೆಗೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಬೇಕು. ಎಲ್ಲ ಎಂಜಿನಿಯರು, ಅವರ ಸಿಬ್ಬಂದಿಗೆ ವಹಿಸಿದ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮಾಡಬೇಕು. ಚುನಾವಣಾ ಕರ್ತವ್ಯದಲ್ಲಿ ವಹಿಸಲಾದ ಜವಾಬ್ದಾರಿಯಲ್ಲಿ ಲೋಪದೋಷ ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಮತದಾನ ಕುರಿತು ಅರಿವು ಮೂಡಿಸಲು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ಸ್ವತಂತ್ರವಾಗಿ ನಡೆಸಲು ಅನುಕೂಲವಾಗುವಂತೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ಮತದಾರರಿಗೆ ತಿಳಿವಳಿಕೆ ನೀಡಬೇಕು. ಚುನಾವಣಾ ಪ್ರಚಾರ ಮತ್ತು ನೀತಿ ಸಂಹಿತೆ ಜಾರಿ ಬಗ್ಗೆ ಅರಿವು ಮೂಡಿಸಬೇಕು. ಚುನಾವಣೆ ಮುನ್ನ ಮತದಾರರ ಚೀಟಿ ಹಂಚುವಲ್ಲಿ ಬಿಎಲ್ಓಗಳ ಸಹಯೋಗದೊಂದಿಗೆ ಎಲ್ಲ ಮತದಾರರಿಗೆ ಮತದಾರರ ಚೀಟಿ ತಲುಪಿಸಬೇಕು. ತಮಗೆ ವಹಿಸಿರುವ ಎಲ್ಲ ಚುನಾವಣೆ ಕಾರ್ಯಗಳನ್ನು ನಿರ್ಲಕ್ಷ್ಯ ತೋರದೆ ನಿರ್ವಹಿಸಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಮಗೆ ನೀಡಿರುವ ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ ನೀತಿ ಸಂಹಿತೆ ಅನುಷ್ಠಾನ ತಂಡಕ್ಕೆ ನೀಡಬೇಕೆಂದು ಅವರು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

