ಪತ್ನಿಗೆ ತಪ್ಪಿದ ಕೈ ಟಿಕೆಟ್: ಕೆಜೆಪಿಯತ್ತ ಕೃಷ್ಣನಾಯ್ಕ
ಹಗರಿಬೊಮ್ಮನಹಳ್ಳಿ: ರೆಡ್ಡಿ ಸಹೋದರರು ಹಾಗೂ ಸ್ಥಳೀಯ ಬಿಜೆಪಿ ಶಾಸಕರ ಅರ್ಭಟದ ಮಧ್ಯೆ ತಾಲೂಕು ಪಂಚಾಯ್ತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಕಾರಣಿಕರ್ತರಾದ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ರಾಯರಾಳುತಾಂಡ ಕೃಷ್ಣನಾಯ್ಕ ಅವರನ್ನು ಕೆಜೆಪಿಯತ್ತ ಸೆಳೆಯಲು ತೀವ್ರ ಪ್ರಯತ್ನಗಳು ಕೆಜೆಪಿ ವಲಯದಲ್ಲಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಈ ಚುನಾವಣೆಯಲ್ಲಿ ಸತತ ಎರಡು ಬಾರಿ ಬಳ್ಳಾರಿ ಜಿಲ್ಲಾ ಪಂಚಾಯ್ತಿಗೆ ಆಯ್ಕೆಯಾಗಿರುವ ತಮ್ಮ ಪತ್ನಿ ಹೇಮ್ಲವ್ವಗೆ ಮಹಿಳಾ ಕೋಟಾದಡಿ ಟಿಕೆಟ್ ನಿರಾಕರಿಸದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್ನ ಈ ನಿರ್ಧಾರದಿಂದ ಕೃಷ್ಣನಾಯ್ಕ ತೀವ್ರ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಪಕ್ಷವನ್ನು ತೊರೆಯುವ ಚಿಂತನೆ ನಡೆಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡನನ್ನು ತಮ್ಮತ್ತ ಸೆಳೆಯಲು ಕೆಜೆಪಿ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಹೈಕಮಾಂಡ್ ಮೌನ
ಸದ್ಯ ತಮ್ಮ ಪತ್ನಿ, ಬೆಂಬಲಿಗರ ಸಮೇತರಾಗಿ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಕೃಷ್ಣನಾಯ್ಕ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ತಮ್ಮ ಪತ್ನಿಗೆ ಟಿಕೆಟ್ ನೀಡಬೇಕು ಹಾಗೂ ಸದ್ಯ ಘೋಷಣೆ ಮಾಡಿರುವ ಹೊರಗಿನ ಅಭ್ಯರ್ಥಿ ಎಲ್. ಮಾರೆಣ್ಣ ಅವರನ್ನು ಹಿಂದಕ್ಕೆ ಪಡೆಯುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿರುವ ಮನವಿ ಪತ್ರವನ್ನು ಎಐಸಿಸಿ ಕಚೇರಿಗೆ ಶನಿವಾರ ತಲುಪಿಸಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದೇ ಹೈಕಮಾಂಡ್ ಮೌನವಹಿಸಿದೆ. ಇತ್ತ ಹೇಮ್ಲವ್ವಗೆ ಟಿಕೆಟ್ ಸಿಗುವುದಿಲ್ಲ ಎಂಬುವುದು ಖಚಿತವಾಗುತ್ತಿದ್ದಂತೆಯೇ ಕ್ಷೇತ್ರದ ಕೆಜೆಪಿ ಮುಖಂಡರು ಕೃಷ್ಣನಾಯ್ಕ ಅವರನ್ನು ಸಂಪರ್ಕಿಸಿ ಕೆಜೆಪಿಯತ್ತ ಸೆಳೆಯುವ ಚುಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ.
ಈ ಮಧ್ಯೆ ಶನಿವಾರ ರಾತ್ರಿ ಹಳೇಹಗರಿಬೊಮ್ಮನಹಳ್ಳಿಯಲ್ಲಿ ಕೆಜೆಪಿ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಹೂವಿನಹಡಗಲಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಧುನಾಯ್ಕ ರಾಯರಾಳುತಾಂಡ ಕೃಷ್ಣನಾಯ್ಕ ಅವರನ್ನು ಕೆಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷ ಉತ್ಸಾಹಕವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆಗೆ ಈ ಕುರಿತು ಮಾತುಕತೆ ಮಾಡಿದ್ದೇವೆ. ಕೃಷ್ಣನಾಯ್ಕ ಕೆಜೆಪಿಗೆ ಸೇರುತ್ತಾರೆಂದು ಅವರು ವಿಶ್ವಾಸವ್ಯಕ್ತಪಡಿಸಿದ್ದನ್ನು ನೋಡಿದರೆ ಕೃಷ್ಣನಾಯ್ಕ ಕೆಜೆಪಿ ಸೇರುವುದು ಸ್ಪಷ್ಟವಾದಂತೆ ಕಾಣುತ್ತದೆ.
ಕೃಷ್ಣನಾಯ್ಕ ಈ ಕ್ಷೇತ್ರದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕ. ಅವರ ಪತ್ನಿ ಹೇಮ್ಲವ್ವ ಹಾಲಿ ಹಗರಿಬೊಮ್ಮನಹಳ್ಳಿ ಜಿಪಂ ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಇವರ ಪರಿಶ್ರಮದಿಂದಲೇ ಇಲ್ಲಿನ ತಾಪಂನಲ್ಲಿ ಕಾಂಗ್ರೆಸ್ ಆಡಳಿತಕ್ಕೇರುವಂತಾಯಿತು. ಹೀಗಾಗಿ ಕೃಷ್ಣನಾಯ್ಕ ಕೆಜೆಪಿ ಅಭ್ಯರ್ಥಿಯಾದರೆ ಕಾಂಗ್ರೆಸ್ ಮತಗಳು ಛಿದ್ರವಾಗುವುದಂತೂ ಖಚಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

