ಬಳ್ಳಾರಿ

ಪಕ್ಷೇತರನಾಗಿ ಗೆದ್ದು ಜನಸೇವೆ ಮಾಡುವೆ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಏ. 14
ಒಂದು ಕ್ಷೇತ್ರದಲ್ಲಿ ಸ್ವಂತ ಶಕ್ತಿಯಿಂದ ನಿಂತು ಗೆದ್ದರೆ ಮಾತ್ರ ಯಾವುದೇ ಸರ್ಕಾರ ಅಥವಾ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದರೂ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಬಹುದು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು ಅಪೇಕ್ಷೆ, ಒಲವು ವ್ಯಕ್ತಪಡಿಸಿದ್ದರಿಂದ ನಾನು ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.
ಹೀಗೆಂದವರು ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ. ರೈತರ ಹಿತರಕ್ಷಣೆಗೆ ಬೇಕಾಗುವ ಅಗತ್ಯ ಕ್ರಮಗಳನ್ನು ಪಕ್ಷೇತರ ಶಾಸಕರಾದರೂ ಮಾಡಲು ಸಾಧ್ಯ. ಯಾವುದೋ ಪಕ್ಷದಿಂದ ಗೆದ್ದು ಬಂದು, ಒಂದು ವೇಳೆ ಆ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರಲು ಆಗುವುದಿಲ್ಲ ಎಂಬ ಭಾವನೆ ತಮ್ಮದಾಗಿದೆ. ಅಧಿಕಾರದಲ್ಲಿ ಯಾವುದೇ ಪಕ್ಷ ಇದ್ದರೂ ಆ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದೇ ಸೂಕ್ತವೆಂದು ನಿರ್ಧರಿಸಿ ಕಣಕ್ಕಿಳಿದಿದ್ದೇನೆಂದರು.
ತಮ್ಮ ಐದು ವರ್ಷಗಳ ಅವಧಿಯ ರಾಜಕೀಯ ಅನುಭವಗಳನ್ನು ಹಾಗೂ ತಮ್ಮ ರಾಜಕೀಯ ನಡೆಯ ಕುರಿತು ಶಾಸಕ ಬಿ. ನಾಗೇಂದ್ರ 'ಕನ್ನಡಪ್ರಭ' ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು. ಸಂದರ್ಶನದ ಪೂರ್ಣಪಾಠ ಇಂತಿದೆ.
ಜನರ ಪ್ರೇರಣೆ: ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಜನರ ಶ್ರೀರಕ್ಷೆಯೇ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಲ್ಲುವಂತೆ ಪ್ರೇರಣ ನೀಡಿದೆ. ಕ್ಷೇತ್ರದ ಜನರ ಅಭಿಮಾನಕ್ಕೆ ಚಿರುಋಣಿಯಾಗಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಂದಾಗಿಯೇ ಕೂಡ್ಲಿಗಿ ಪಪಂನಲ್ಲಿ ನನ್ನ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸುವ ಮೂಲಕ ತಮ್ಮ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಬಾರಿ ಮತದಾರರ ಆಪೇಕ್ಷೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ.
ಮೂಲ ಸೌಲಭ್ಯಕ್ಕೆ ಆದ್ಯತೆ: ತಾವು ಶಾಸಕನಾದಾಗಿನಿಂದಲೂ ಕ್ಷೇತ್ರದಲ್ಲಿನ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚಿ ಹಾಕುವುದೇ ನಮ್ಮ ಮೂಲ ಉದ್ದೇಶವಾಗಿದೆ. ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಜನರಲ್ಲಿ ನೀರಾವರಿಯ ಆಶಯವನ್ನು ಈಡೇರಿಸುವುದು ನನ್ನ ಆದ್ಯ ಕರ್ತವ್ಯ ಕೂಡ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೂಡ್ಲಿಗಿ ತಾಲೂಕಿನ ಸುಮಾರು 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಮಾಡಬೇಕೆಂಬ ಮಹಾದಾಸೆ ಇದ್ದು, ಅದನ್ನು ಮುಂದಿನ ದಿನಗಳಲ್ಲಿ ಈಡೇರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಕುಡಿಯುವ ನೀರಿನ ಅತಿಯಾದ ಸಮಸ್ಯೆ ಕ್ಷೇತ್ರಾದ್ಯಂತ ಇದೆ. ಈ ಅವ್ಯವಸ್ಥೆಯನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತದೆ. ಐದು ವರ್ಷದ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಹೆಚ್ಚು ಶ್ರಮಿಸಲಾಗಿದೆ ಎಂದು ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದರು.
ಅಭಿವೃದ್ಧಿ ಪರ ಮತ: ಜನರ ಸಮಸ್ಯೆ ಹಾಗೂ ಭಾವನೆಗಳಿಗೆ ಸ್ಪಂದಿಸುವ ತಮ್ಮ ಗುಣವೇ ಕ್ಷೇತ್ರದ ಮತದಾರರ ಒಲವು ತಮ್ಮ ಪರ ವ್ಯಕ್ತವಾಗಿ, ಅದು ಅಭಿವೃದ್ಧಿ ಪರವಾಗಿ ಮತಗಳಾಗಲಿವೆ. ಅಲ್ಲದೆ ಕ್ಷೇತ್ರದಲ್ಲಿ ಐದು ವರ್ಷಗಳ ಅವಧಿಯಲ್ಲಿ ಮಾಡಿರುವ ಹೆಚ್ಚು ಅಭಿವೃದ್ಧಿ ಕೆಲಸಗಳಿಂದಾಗಿ ಜನರು ತೀರಾ ಅಭಿಮಾನ ವ್ಯಕ್ತಪಡಿಸುತ್ತಾರೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ರೈತರ ಪರವಾದ ಕಾರ್ಯಗಳು ನಡೆದಿವೆ. ಮುಂದಿನ ದಿನಗಳಲ್ಲಿ ನೀರಾವರಿಯ ಆದ್ಯತೆಯೊಂದಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ನೆಚ್ಚಿನ ಮತದಾರರು ಅವಕಾಶ ಮಾಡಿಕೊಡಲಿದ್ದಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಬಿ. ನಾಗೇಂದ್ರ.
ಅಜಾತ ಶತ್ರು ಎಂಬ ಭಾವನೆ: ಬೇರೆ ಪಕ್ಷಗಳನ್ನು ಟೀಕೆ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಕಾರ್ಯಕರ್ತರನ್ನು ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸಮಾನವಾಗಿ ಕಂಡಿದ್ದೇನೆ. ಅವರು ಕೂಡ ಯಾವತ್ತು, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಸಹಕರಿಸಿದ್ದಾರೆ. ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ತಮಗೆ ಸ್ಪಂದಿಸುವ ಮೂಲಕ ಅಜಾತ ಶತ್ರು ಎನ್ನುವ ರೀತಿಯಲ್ಲಿದ್ದೇನೆ. ಎಂದಿಗೂ ಯಾವುದೆ ಪಕ್ಷದೊಂದಿಗೆ ಅನಗತ್ಯ ಗೊಂದಲ, ನಿಷ್ಠುರತೆಯನ್ನು ತೋರಿಲ್ಲ. ಇದರಿಂದಾಗಿಯೇ ಕ್ಷೇತ್ರದ ಜನತೆ ತಮ್ಮನ್ನು ಸ್ವೀಕರಿಸಲು ಕಾರಣ ಎನ್ನುತ್ತಾರೆ ನಾಗೇಂದ್ರ.
ಪಪಂ ಚುನಾವಣೆಯಲ್ಲಿ ಜನರ ಒಲವು: ಇತ್ತೀಚೆಗೆ ನಡೆದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ತಾವು ನಿಲ್ಲಿಸಿದ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಕ್ಷೇತ್ರದ ಜನರು ಅಭಿವೃದ್ಧಿ ಪರವಾಗಿ, ತಮ್ಮ ಬಗ್ಗೆ ಒಲವು ವ್ಯಕ್ತಪಡಿಸಿರುವುದಕ್ಕೆ ಸಾಕ್ಷಿಯಾಗಿದೆ. ಇದೀಗ ಅದೇ ಮತದಾರರು ನಾನು ಪಕ್ಷೇತರನಾಗಿ ನಿಲ್ಲುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಮತದಾರ ಒಲವನ್ನು ನಂಬಿಕೊಂಡು ಸ್ವತಂತ್ರವಾಗಿ ನಿಲ್ಲಲು ನಿಶ್ಚಯಿಸಿದ್ದೇನೆ. ಈ ಬಾರಿಯು ಜನರು ತಮಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ.
ಈ ಸಂದರ್ಭದಲ್ಲಿ ಯಾವ ಪಕ್ಷವನ್ನು ಟೀಕೆ ಮಾಡುವ ಅಗತ್ಯವಿಲ್ಲ, ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅದೆ ಸಮಯದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಶೀಲಿಸಲು ಮುಂದಾಗುತ್ತೇನೆ ಎಂದು ಕೂಡ್ಲಿಗಿ ಕ್ಷೇತ್ರದ ಹಾಲಿ ಶಾಸಕ, ಪಕ್ಷೇತರ ಅಭ್ಯರ್ಥಿ ಬಿ. ನಾಗೇಂದ್ರ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.