ವಿಶೇಷತೆ ಕಂಡ ವಿಜಯನಗರ ಕ್ಷೇತ್ರ
-ಸಿ.ಕೆ. ನಾಗರಾಜ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 15
ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು ಅನೇಕ ವಿಶೇಷತೆಗಳನ್ನು ಹೊಂದಿದೆ. ಕ್ಷೇತ್ರದ ಜನತೆ ಇದುವರೆಗೆ ನಡೆದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ನಿಷ್ಠೆ ತೋರಿದ್ದಾರೋ ಅಥವಾ ವ್ಯಕ್ತಿಗತವಾಗಿ ನಿಷ್ಠೆ ತೋರಿದ್ದಾರೋ ಎನ್ನುವುದು ಇಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.
ಇದುವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಯಾರು ಕೂಡ ಸತತ ಎರಡು ಬಾರಿ ಆಯ್ಕೆಯಾಗಿಲ್ಲ. ಇಲ್ಲಿ ಸಾಮಾನ್ಯವಾಗಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ತಲಾ ಒಂದು ಬಾರಿ ಆಯ್ಕೆಯಾಗಿದ್ದರೆ, ಪಕ್ಷೇತರರಿಗೂ ಇಲ್ಲಿನ ಮತದಾರ ಮಣೆ ಹಾಕಿದ್ದಾನೆ. 2008ರ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ವಿಜಯನಗರ ವಿಧಾನಸಭಾ ಕ್ಷೇತ್ರವಾಗಿ ಹೊಸಪೇಟೆ ಕ್ಷೇತ್ರ ಮರು ನಾಮಕರಣಗೊಂಡಿದೆ. 1957ರಿಂದ 2013ರ ವರೆಗೆ ಒಟ್ಟು 15 ಚುನಾವಣೆಗಳನ್ನು ಈ ಕ್ಷೇತ್ರ ಕಂಡಿದೆ. 14 ಚುನಾವಣೆಗಳಲ್ಲಿ ಸಿಂಗ್ ಮನೆತನದ ಬಿ. ಸತ್ಯನಾರಾಯಣ ಸಿಂಗ್ ಅವರನ್ನು ಬಿಟ್ಟರೆ ಉಳಿದವರಾರು ಈ ಕ್ಷೇತ್ರದಲ್ಲಿ ಸತತ 2ನೇ ಬಾರಿ ಗೆದ್ದು ಶಾಸಕರಾಗಿಲ್ಲ. ಆನಂದ್ ಸಿಂಗ್ ಅವರು ತಮ್ಮ ದೊಡ್ಡಪ್ಪ (ಸತ್ಯನಾರಾಯಣ ಸಿಂಗ್) ರೀತಿ ಹೊಸ ಇತಿಹಾಸ ಬರೆಯಲು ಮರುಆಯ್ಕೆ ಬಯಸಿ ಸೋಮವಾರ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ 2ನೇ ಬಾರಿ ಗೆಲವು ಸಾಧಿಸುವರೆ ಎಂಬುದು ಕುತೂಹಲ.
ಒಬ್ಬರು ಮಾತ್ರ ಎರಡು ಬಾರಿ: 1957ರ ಮೊದಲ ಚುನಾವಣೆಯಲ್ಲಿ ಆರ್. ನಾಗನಗೌಡರು ಕಾಂಗ್ರೆಸ್ನಿಂದ ಆಯ್ಕೆಯಾದರೆ, 1962ರಲ್ಲಿ ಮುರಾರಿ ಕಮಲ ಶ್ರೀರಾಮುಲು ಪಿಎಸ್ಪಿಯಿಂದ ಗೆಲವು ಸಾಧಿಸಿದ್ದರು. ಆಗ ಆರ್. ನಾಗನಗೌಡ ಅವರು ಕಾಂಗ್ರೆಸ್ನಿಂದ ಸೋಲುಂಡಿದ್ದರು. 1967ರಲ್ಲಿ ಆರ್. ನಾಗನಗೌಡ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ನಾಗನಗೌಡರ ನಿಧನದಿಂದಾಗಿ 1970ರಲ್ಲಿ ನಡೆದ ಉಪಚುನಾವಣೆಯಲ್ಲಿ ಎನ್ಸಿಜೆ ಪಕ್ಷದಿಂದ ಬಿ. ಸತ್ಯನಾರಾಯಣ ಸಿಂಗ್ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ. ಸತ್ಯನಾರಾಯಣ ಸಿಂಗ್ ಕಾಂಗ್ರೆಸ್ನಿಂದ 2ನೇ ಬಾರಿಗೆ ವಿಜಯಿಯಾದರು. ಆ ಮೂಲಕ ಸತತ ಎರಡು ಬಾರಿ ಬಿ. ಸತ್ಯನಾರಾಯಣ ಸಿಂಗ್ ಗೆಲವು ಸಾಧಿಸಿ ಇತಿಹಾಸ ಬರೆದಿದ್ದಾರೆ. ಅವರ ಇತಿಹಾಸವನ್ನು ಇದುವರೆಗೆ ಯಾರು ಅಳಿಸಿಲ್ಲ. ಆದರೆ ಈ ಬಾರಿ ಆ ಅವಕಾಶ ಸಚಿವ ಆನಂದ್ ಸಿಂಗ್ ಅವರಿಗೆ ಇದೆ ಎನ್ನಲಾಗುತ್ತಿದೆ.
1978ರಲ್ಲಿ ಕೆ. ಗುಡುಸಾಹೇಬ್ ಕಾಂಗ್ರೆಸ್ನಿಂದ, 1983ರಲ್ಲಿ ಜಿ. ಶಂಕರಗೌಡ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಜಯ ಕಂಡರು. 1985ರಲ್ಲಿ ಭೀಮನೇನಿ ಕೊಂಡಯ್ಯ (ಜೆಎನ್), 1989ರಲ್ಲಿ ಗುಜ್ಜಲ ಹನುಮಂತಪ್ಪ ಜನತಾದಳದಿಂದ ಜಯಗಳಿಸಿದ್ದರು. 1991ರಲ್ಲಿ ಬಿ. ರತನ್ಸಿಂಗ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಬಿಜೆಪಿಯ ಜಿ. ಶಂಕರಗೌಡ ಅವರನ್ನು ಸೋಲಿಸಿದ್ದರು. 1994ರಲ್ಲಿ ಜಿ. ಶಂಕರಗೌಡ ಬಿಜೆಪಿಯಿಂದ ಗೆಲವು ಸಾಧಿಸಿದ್ದರು. 1999ರಲ್ಲಿ ಗುಜ್ಜಲ ಜಯಲಕ್ಷ್ಮೀ ಕಾಂಗ್ರೆಸ್ನಿಂದ ಗೆಲವು ಕಂಡರು. ಆಗ ಜಿ. ಶಂಕರಗೌಡ ಬಿಜೆಪಿಯಿಂದ ಸೋತಿದ್ದರು. 2004ರ ಚುನಾವಣೆಯಲ್ಲಿ ಗಣಿ ಉದ್ಯಮಿ ಎಚ್.ಆರ್. ಗವಿಯಪ್ಪ (ಪಕ್ಷೇತರ) ಗೆಲ್ಲಿಸುವ ಮೂಲಕ ಪಕ್ಷೇತರನಿಗೂ ಕ್ಷೇತ್ರದ ಜನತೆ ಅವಕಾಶ ನೀಡಿದ್ದರು. ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2008ರಲ್ಲಿ ಬಿ.ಎಸ್. ಆನಂದ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿ ಜಯ ಕಂಡರು.
ಕಣದಲ್ಲಿ ಘಟಾನುಘಟಿಗಳು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆನಂದ್ ಸಿಂಗ್ ಬಿಜೆಪಿಯಿಂದ, ಕಾಂಗ್ರೆಸ್ನಿಂದ ಎಚ್. ಅಬ್ದುಲ್ ವಹಾಬ್, ಬಿಎಸ್ಸಾರ್ ಕಾಂಗ್ರೆಸ್ನಿಂದ ರಾಣಿ ಸಂಯುಕ್ತ ಸೇರಿದಂತೆ ಪಕ್ಷೇತರರು ಸ್ಪರ್ಧಿಸಿದ್ದಾರೆ. ಆದರೆ ಇದುವರೆಗೂ ಜೆಡಿಎಸ್ ಮತ್ತು ಕೆಜೆಪಿಯಿಂದ ಯಾರೂ ಸ್ಪರ್ಧಿಸಿಲ್ಲ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ದೀಪಕ್ಕುಮಾರ್ ಸಿಂಗ್ ಜೆಡಿಎಸ್, ಕೆಜೆಪಿ ಇಲ್ಲವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಕೇಳಿ ಬರುತ್ತಿದೆ. ಆದರೆ ಮಾ. 17ರವರೆಗೂ ದೀಪಕ್ಕುಮಾರ್ ಸಿಂಗ್ ಕಾದು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಸಚಿವ ಆನಂದ್ ಸಿಂಗ್ 2ನೇ ಬಾರಿಗೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಸತತ 2ನೇ ಬಾರಿಗೆ ಗೆಲವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸುವರೆ ಎಂದು ಕ್ಷೇತ್ರದ ಜನತೆ ಕುತೂಹಲಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

