ಐದು ವರ್ಷಕ್ಕೆ ಶ್ರೀರಾಮುಲು ಆಸ್ತಿ ದುಪ್ಪಟ್ಟು!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 16
ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಎಸ್ಸಾರ್ ಪಕ್ಷದ ಅಭ್ಯರ್ಥಿ ಬಿ. ಶ್ರೀರಾಮುಲು ಅವರ ಆಸ್ತಿ ಐದು ವರ್ಷಗಳ ಅವಧಿಯಲ್ಲಿ ದ್ವಿಗುಣಗೊಂಡಿದೆ.
2008ರಲ್ಲಿ ಚರ ಹಾಗೂ ಸಿರಾಸ್ತಿ ಸೇರಿದಂತೆ ರು. 19.06 ಕೋಟಿ ಇತ್ತು, 2013ರಲ್ಲಿ ಚರ ಹಾಗೂ ಸ್ಥಿರಾಸ್ತಿಯು ರು. 43.74 ಕೋಟಿಗಳಷ್ಟಾಗಿದೆ. ಅಂದರೆ ಕೇವಲ ಐದು ವರ್ಷಗಳ ಅವಧಿಯಲ್ಲಿ ಸುಮಾರು ರು. 24.68 ಕೋಟಿ ಆಸ್ತಿ ಹೆಚ್ಚಳವಾಗಿದೆ. 2008ರ ಚುನಾವಣೆಯಲ್ಲಿ ಕುಟುಂಬದ ಹೆಸರಿನಲ್ಲಿ ರು. 8.51 ಕೋಟಿ ಮೌಲ್ಯದ ಚರಾಸ್ತಿ, ರು. 10.55 ಕೋಟಿ ಸ್ಥಿರಾಸ್ತಿ ಸೇರಿದಂತೆ ರು. 19.06 ಕೋಟಿಯಷ್ಟಿದ್ದ ಆಸ್ತಿ 5 ವರ್ಷಗಳಲ್ಲಿ ರು. 43.74 ಕೋಟಿಯಷ್ಟಾಗಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ತಮ್ಮ ಒಟ್ಟು ಆಸ್ತಿ ರು. 43.74 ಕೋಟಿ ಎಂದು ಅವರು ಘೋಷಿಸಿದ್ದಾರೆ.
ಅವರ ಘೋಷಣೆ ಪ್ರಕಾರ 4 ಕೆಜಿಗೂ ಅಧಿಕ ಚಿನ್ನ, ರು. 12.45 ಲಕ್ಷ ನಗದು ಸೇರಿದಂತೆ ರು. 28.67 ಕೋಟಿ ಮೌಲ್ಯದ ಚರಾಸ್ತಿ, ರು. 14.77 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿರುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ.
ಕೈಯಲ್ಲಿರುವುದು ರು. 12 ಲಕ್ಷ ಮಾತ್ರ: ಸದ್ಯ ಶ್ರೀರಾಮುಲು ಅವರ ಕೈಯಲ್ಲಿರುವುದು ಕೇವಲ ರು. 12 ಲಕ್ಷ ನಗದು ಮಾತ್ರವಂತೆ. ಇನ್ನು ಪತ್ನಿ ಬಳಿ ರು. 3.25 ಲಕ್ಷ ನಗದು ಇದೆ. 4,257 ಗ್ರಾಂ ಚಿನ್ನ ಹೊಂದಿದ್ದು, ಅದು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ರು. 1.15 ಕೋಟಿಗೆ ಬೆಲೆಬಾಳುತ್ತದೆ. ಶ್ರೀರಾಮುಲು ಪತ್ನಿ ಭಾಗ್ಯಲಕ್ಷ್ಮಿ ಅವರ ಹತ್ತಿರ ರು. 62.90 ಲಕ್ಷ ಮೌಲ್ಯದ 2,330 ಗ್ರಾಂ ಚಿನ್ನ ಇದೆ. ಶ್ರೀರಾಮುಲು ರು. 22.44 ಕೋಟಿ ಮೌಲ್ಯದ ಚರಾಸ್ತಿ, ಪತ್ನಿ ರು. 78 ಲಕ್ಷದ ಚರಾಸ್ತಿ ಹೊಂದಿದ್ದರೆ, ಮಕ್ಕಳ ಹೆಸರಿನಲ್ಲಿ ರು. 5.75 ಕೋಟಿ ಮೌಲ್ಯದ ವಿಮಾ ಪಾಲಿಸಿ ಹೊಂದಿದ್ದಾರೆ. ಬಳ್ಳಾರಿ, ಗದಗ, ಬೆಂಗಳೂರು ಮತ್ತಿತರ ಕಡೆಗೆ ಜಮೀನು, ನಿವೇಶನ, ಮನೆ, ನಿರ್ಮಾಣ ಹಂತದ ಮನೆ, ವಾಣಿಜ್ಯ ಕಟ್ಟಡ ಸೇರಿ ರು. 13.74 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಕೋಟ್ಯಂತರ ಮೌಲ್ಯದ ಕಾರು: ಹಮ್ಮರ್ ಕಾರು ( 1.20 ಕೋಟಿ), ಬಿಎಂಡಬ್ಲ್ಯೂ ಕಾರು ( 1.08 ಕೋಟಿ) ದುಬಾರಿ ಮೌಲ್ಯದ ಕಾರನ್ನು ಶ್ರೀರಾಮುಲು ಹೊಂದಿದ್ದಾರೆ. ಇತ್ತೀಚೆಗೆ ಪ್ರಚಾರಕ್ಕೆಂದು ದುಬಾರಿ ಕಾರುಗಳನ್ನು ಖರೀದಿಸಿದ್ದರು. ರು. 14.45 ಲಕ್ಷ ಮೌಲ್ಯದ ಹ್ಯುಂಡೈ ಸ್ಯಾಂಟಾ ಎಫ್ಇ ಕಾರನ್ನು ಪತ್ನಿ ಭಾಗ್ಯಲಕ್ಷ್ಮಿ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ ರು. 6.61 ಕೋಟಿ ಷೇರುಗಳನ್ನು ಹೂಡಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ರು. 40.52 ಲಕ್ಷ ಡಿಪಾಜಿಟ್ ಮಾಡಿದ್ದರೆ, ವಿಮೆ, ಅಂಚೆ ಕಚೇರಿ ಸೇರಿದಂತೆ ಇತರೆ ಕಡೆಗಳಲ್ಲಿ ರು. 9.50 ಕೋಟಿ ಡಿಪಾಜಿಟ್ ಮಾಡಿದ್ದಾರೆ. ರು. 8.81 ಕೋಟಿ ಹಣವನ್ನು ಇತರರಿಗೆ ಸಾಲದ ರೂಪದಲ್ಲಿ ನೀಡಿದ್ದಾರೆ.
ಗಣಿ ಧಣಿಗೂ ಸಾಲದ ಭಾರ!: ಕೇವಲ ಶ್ರೀಮಂತಿಕೆ ಮಾತ್ರವಲ್ಲದೆ ರು. 15.04 ಕೋಟಿ ಸಾಲವೂ ಇದೆ ಎಂದು ಘೋಷಿಸಿದ್ದಾರೆ. ಬಳ್ಳಾರಿಯ ಹವಂಭಾವಿ ಪ್ರದೇಶದಲ್ಲಿ ಬೃಹತ್ ಬಂಗಲೆ, ಗದುಗಿನಲ್ಲಿ ಮನೆ, ಬಳ್ಳಾರಿಯ ಬೆಳಗಲ್ ಕ್ರಾಸ್ ಬಳಿ ಜಮೀನು, ಬಳ್ಳಾರಿ ತಾಲೂಕಿನ ಹದ್ದಿನಗುಂಡು ಗ್ರಾಮದ ಬಳಿ 8.82 ಎಕರೆ ಜಮೀನು, ಬೆಂಗಳೂರಿನ ದೇವನಹಳ್ಳಿ ಬಳಿಯ ಸದಾಹಳ್ಳಿಯಲ್ಲಿ 19,059 ಚದರ ಅಡಿಯ ನಿವೇಶನ, ಬಳ್ಳಾರಿಯ ಎಸ್ಪಿ ವೃತ್ತದ ಬಳಿ ವಾಣಿಜ್ಯ ಸಂಕೀರ್ಣ ಒಳಗೊಂಡಂತೆ ರು. 14.77 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಲಗಪ್ಪ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಇವರ ಮೇಲೆ ವಿವಿಧ ರೀತಿಯ 8 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

