ಬಳ್ಳಾರಿ

ಕೆಜೆಪಿ ಬೆಂಬಲಕ್ಕೆ ಕಾಂಗ್ರೆಸ್, ಜೆಡಿಎಸ್ ಬಂಡಾಯಗಾರರು

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 20
ಸ್ಥಳೀಯ ಕಾಂಗ್ರೆಸ್ ಮುಖಂಡರ ಆದೇಶದಂತೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ. ಬುಳ್ಳಪ್ಪ, ಜೆಡಿಎಸ್ ಬಂಡಾಯ ಅಭ್ಯರ್ಥಿ ಪುತ್ರೇಶ ನಾಮಪತ್ರಗಳನ್ನು ವಾಪಾಸ್ ಪಡೆದು ಕೆಜೆಪಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿ, ಕೆಜೆಪಿಯ ಮಧುನಾಯ್ಕಗೆ ಬೆಂಬಲ ನೀಡಲಾಗುವುದು ಎಂದು ಕೆ. ವಿರೂಪಾಕ್ಷಗೌಡ, ಗುರುವಿನಕೊಟ್ರಯ್ಯ ತಿಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಮುಖಂಡ ಬುಳ್ಳಪ್ಪ ಅವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸ್ಥಳೀಯ ಮುಖಂಡರು 3 ದಿನಗಳ ಕಾಲ ನಿರಂತರ ಸಭೆ ಮಾಡಿ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಪಿ.ಟಿ. ಪರಮೇಶ್ವರ ನಾಯ್ಕರನ್ನು ಸೋಲಿಸಬೇಕೆಂಬ ಒಮ್ಮತದ ನಿರ್ಧಾರದೊಂದಿಗೆ ಸುದೀರ್ಘ ಚರ್ಚೆ ಮಾಡಲಾಗಿ ಕೊನೆಗಳಿಗೆಯಲ್ಲಿ ಕೆಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆಂದು ಹೇಳಿದರು.
ಸ್ಥಳೀಯರ ಕಡೆಗಣನೆ: ಕೆಪಿಸಿಸಿ ತಪ್ಪು ನಿರ್ಧಾರ ತೆಗೆದುಕೊಂಡು ಸ್ಥಳೀಯರನ್ನು ಕಡೆಗಣಿಸಿ ವಲಸಿಗರಿಗೆ ಟಿಕೆಟ್ ನೀಡಿದ್ದಾರೆ. 15 ಸಾವಿರ ಮತಗಳ ಅಂತರದಿಂದ ಸೋತ ಅಭ್ಯರ್ಥಿಗೆ ಟಿಕೆಟ್ ನೀಡುವುದಿಲ್ಲವೆಂದು ಹೇಳಿದ್ದ ಹೈಕಮಾಂಡ್ ನಿಯಮ ಮೀರಿದೆ. ಆದರೆ ಪಕ್ಕದ ಹರಪ್ಪನಹಳ್ಳಿ ಕ್ಷೇತ್ರಕ್ಕೆ ಎಂ.ಪಿ. ರವೀಂದ್ರ ಇವರಿಗೆ ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕೆಪಿಸಿಸಿ ಮುಖಂಡರು, ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಟಿಕೆಟ್ ಕೊಡಿಸಿದ್ದಾರೆ. ಹರಪ್ಪನಹಳ್ಳಿ ಟಿಕೆಟ್‌ಗೂ ಖೊಟ್ಟಿ ದಾಖಲೆಗಳೇ ಸಾಕ್ಷಿಯಾಗಿವೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಕೆಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿ ಬಹಿರಂಗವಾಗಿಯೇ ಪ್ರಚಾರ ಕೈಗೊಳ್ಳುತ್ತೇವೆ. ತಾವು ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿದ್ದೇವೆಂದು ಹೇಳುತ್ತಾ, ತಾಕತ್ತಿದ್ದರೆ ತಮ್ಮ ಮೇಲೆ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಸ್ಥಳೀಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನು ಪಕ್ಷದಿಂದ ಉಚ್ಚಾಟಿಸಿ ಟಿಕೆಟ್‌ನಿಂದ ವಂಚಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು ನಿಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿಲ್ಲ, ಪಕ್ಷ ಸಂಘಟನೆ ಮಾಡಿ ಟಿಕೆಟ್ ನೀಡುತ್ತೇವೆಂದು ಕೊಟ್ಟ ಮಾತು ಉಳಿಸಿಕೊಳ್ಳದೆ ಬೇಕಾಬಿಟ್ಟಿಯಾಗಿ ಟಿಕೆಟ್ ಹಂಚಿಕೆ ಮಾಡಿದ್ದಾರೆಂದು ದೂರಿದರು.
ಕೆಜೆಪಿಗೆ ಬೆಂಬಲ: ಕೆಜೆಪಿ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ, ತಮ್ಮಿಂದ ಬಿಜೆಪಿಯೊಂದಿಗೆ ಹೊಂದಾಣಿಕೆ ಕಷ್ಟಸಾಧ್ಯ. ಈಗಾಗಲೇ ಶಾಸಕ ಚಂದ್ರನಾಯ್ಕ ಜನ ಬೆಂಬಲವಿಲ್ಲದೆ ಜನರಿಂದ ತಿರಸ್ಕಾರಗೊಂಡಿದ್ದಾರೆ. ಅಂತವರಿಗೆ ಬೆಂಬಲ ನೀಡುವುದು ತಪ್ಪು ನಿರ್ಧಾರ. ಬಿಎಸ್ಸಾರ್ ಕಾಂಗ್ರೆಸ್ ಈಗ ತಾನೆ ಹುಟ್ಟಿಕೊಂಡಿರುವ ಕೂಸು ಅಷ್ಟೊಂದು ಪ್ರಬಲವಾಗಿಲ್ಲ. ಹೀಗಾಗಿ ಕೆಜೆಪಿ ಅಭ್ಯರ್ಥಿ ಎಲ್. ಮಧುನಾಯ್ಕ ಬುದ್ಧಿವಂತ, ಹೆಚ್ಚು ಜನ ಗಳಿಕೆ ಹೊಂದಿರುವುದರಿಂದ ತಾವು ಕೆಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆಂದು ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಟಿಕೆಟ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕಿದೆ. ಇದರಲ್ಲಿ ಯಾರು ಎಷ್ಟು ಹರಾಜು ಕೂಗುತ್ತಾರೋ ಅಂತವರಿಗೆ ಟಿಕೆಟ್ ನೀಡಿದೆ. ಇದರಿಂದ ನಿಷ್ಠಾವಂತರಿಗೆ ನೋವಾಗಿದ್ದು, ನಮ್ಮೇಲ್ಲ ಹಿರಿಯರ ಮಾತಿನಂತೆ ನಾಮಪತ್ರ ವಾಪಾಸ್ ಪಡೆದು ವಲಸಿಗರಿಗೆ ಜನರು ತಕ್ಕಪಾಠ ಕಲಿಸುತ್ತವೆಂದು ಜಿ.ಬುಳ್ಳಪ್ಪ ಹೇಳಿದರು.
ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ ರು. 5 ಸಾವಿರ ಶುಲ್ಕ ಕಟ್ಟುವಾಗ ತಾವು ಕಾಂಗ್ರೆಸ್ ಪಕ್ಷದವರಲ್ಲವೆಂದು ತಮ್ಮಿಂದ ಶುಲ್ಕ ಕಟ್ಟಿಸಿಕೊಳ್ಳದೇ ಹಿಂದಕ್ಕೆ ಕಳಿಸಬಹುದಿತ್ತು ಎಂದ ಅವರು, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯನವರ ಮಾತು ಕಟ್ಟಿಕೊಂಡು ಕೆಪಿಸಿಸಿಯವರು ಜಿಲ್ಲೆಯಲ್ಲಿ ಪಕ್ಷವನ್ನು ಹಾಳು ಮಾಡಿದ್ದಾರೆಂದು ದೂರಿದರು. ಜೆಡಿಎಸ್ ಬಂಡಾಯ ಅಭ್ಯರ್ಥಿ ಕೆ. ಪುತ್ರೇಶ ನಾಮಪತ್ರ ವಾಪಸ್ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜೆಡಿಎಸ್‌ನಿಂದ ಎಂ.ಪಿ. ಪ್ರಕಾಶರು ಬಿಟ್ಟು ಹೋದ ನಂತರ ಕ್ಷೇತ್ರದಲ್ಲಿ ಪಕ್ಷ ಶೂನ್ಯವಾಗಿತ್ತು. ಆದರೆ ತಾವು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೆವು. ಟಿಕೆಟ್ ನೀಡುತ್ತೇವೆಂದು ಆಸೆ ತೋರಿಸಿ ಮೋಸ ಮಾಡಿದ್ದಾರೆ, ಆದ್ದರಿಂದ ಜೆಡಿಎಸ್ ಸೋಲಿಸವುದೇ ತಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ದೂದಾನಾಯ್ಕ, ಕೋಮ್ಯಾನಾಯ್ಕ, ಬಿ.ಎಲ್. ಶ್ರೀಧರ, ಪುರಸಭೆ ಮಾಜಿ ಉಪಾಧ್ಯಕ್ಷ ಮೆಹಬೂಬ್, ಕೆ. ಗೌಸ್‌ಮೋಹಿದ್ದೀನ್, ಇಸಾಕ್, ಕೆಜೆಪಿ ಅಭ್ಯರ್ಥಿ ಮಧುನಾಯ್ಕ, ಕೃಷ್ಣನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.