ಬಳ್ಳಾರಿ

ವಸತಿ ಶಾಲೆ: ರು. 7.50 ಕೋಟಿ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 6
ತಾಲೂಕಿನ ಏಕೈಕ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಶಾಲೆಗೆ ಹಿರೇಹೆಗ್ಡಾಳ ಕಂದಾಯ ಗ್ರಾಮದ ಸಮೀಪದಲ್ಲಿ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ರು. 7.50 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಬಿ. ನಾಗೇಂದ್ರ ತಿಳಿಸಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಮಾತನಾಡಿ, ವಸತಿ ಶಾಲೆಗಳಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ಹೆಚ್ಚಿನ ಆಸಕ್ತಿವಹಿಸಿ ಶಾಲೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ. ಅದರಂತೆ ತಾಯಕನಹಳ್ಳಿ ಸಮೀಪ ಮೊರಾರ್ಜಿ ವಸತಿ ಶಾಲೆ ಕಟ್ಟಡ ಸಹ ಪೂರ್ಣಗೊಂಡಿದೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿರುವ ವಸತಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ವಚ್ಛತೆ ಕಾಪಾಡಿ: ಶಾಲಾ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಅಗತ್ಯ. ಶೈಕ್ಷಣಿಕ ವಾತಾವರಣಕ್ಕೆ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಲು ವಿವಿಧ ಸಾಂಸ್ಕೃತಿಕ ನೃತ್ಯ, ಕ್ರೀಡೆ, ಪ್ರಬಂಧ ಸ್ಪರ್ಧೆ, ಅಲ್ಲದೆ, ಸಂಸತ್ ಮಂತ್ರಿಮಂಡಲ ಮಾದರಿಯಲ್ಲಿ ಶಾಲಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಲು ಗಮನ ಹರಿಸಿರುವ ಇಲ್ಲಿನ ಪ್ರಾಚಾರ್ಯ, ಶಿಕ್ಷಕರ ಶ್ರಮ ಸಾರ್ಥಕವಾಗಿದೆ ಎಂದು ಪ್ರಶಂಸಿಸಿದರು.
ಪ್ರಾಚಾರ್ಯ ಎಸ್. ಶಶಿಕಿರಣ ಪ್ರಾಸ್ತಾವಿಕ ಮಾತನಾಡಿ, ರಾಜ್ಯದಲ್ಲಿ 540 ವಸತಿ ಶಾಲೆಗಳಿದ್ದು, 114  ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿನಿಯರ ವಸತಿ ಶಾಲೆಗಳಿವೆ. ಕೂಡ್ಲಿಗಿ ತಾಲೂಕಿಗೆ ಶಾಸಕ ನಾಗೇಂದ್ರ ಅವರ ಆಸಕ್ತಿಯಿಂದ ಶಾಲೆ ಮುಂಜೂರಾಗಿದೆ ಎಂದು ಅವರು ಹೇಳಿದರು.
ಶಾಲೆಯಲ್ಲಿ ಶಾಸಕ ನಾಗೇಂದ್ರ 2 ತಾಸಿಗೂ ಹೆಚ್ಚು ಕಾಲ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಮಕ್ಕಳೊಂದಿಗೆ ಬೆರೆತಿದ್ದರು. ಯುವ ಮುಖಂಡ ಭೀಮೇಶ್, ಬಿಇಒ ಎಂ.ಆರ್. ಮಂಜುನಾಥ, ಸಮನ್ವಯಾಧಿಕಾರಿ ಮೈಲೇಶ್ ಬೇವೂರ, ಪಪಂ ಸದಸ್ಯ ಎಸ್. ದುರುಗೇಶ್, ರಾಮದುರ್ಗ ಸೂರ್ಯಪಾಪಣ್ಣ, ಮೊರಬ ಶಿವಣ್ಣ, ಹೊಸಹಟ್ಟಿ ನರಸಿಂಹ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.